ಪತ್ರಿಕಾ ಹೇಳಿಕೆ (03-12-2020): ಕರ್ನಾಟಕ ಸರ್ಕಾರವು ಕ್ಷೀರ ಭಾಗ್ಯ ಯೋಜನೆಯನ್ನು ಪುನರಾರಂಭಿಸದೆ ಮಕ್ಕಳ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ

ಪತ್ರಿಕಾ ಹೇಳಿಕೆ

“ಕರ್ನಾಟಕ ಸರ್ಕಾರವು ಕ್ಷೀರ ಭಾಗ್ಯ ಯೋಜನೆಯನ್ನು ಪುನರಾರಂಭಿಸದೆ ಮಕ್ಕಳ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ”

ದಿನಾಂಕ: ೦೩-೧೨-೨೦೨೦


ಕರ್ನಾಟಕ ಸರಕಾರ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲಾ ಮಕ್ಕಳಿಗೆ ಜೂನ್ ೨೦೨೦ ರಿಂದ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲು ಅಥವಾ ಹಾಲಿನಪುಡಿ ನೀಡುತ್ತಿಲ್ಲ ಎಂಬ ಮಾಹಿತಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದ ದಾಖಲೆಯಿಂದ ಬಹಿರಂಗಗೊಂಡಿದೆ.

ಕೋವಿಡ್ ೧೯ ಪಿಡುಗಿನ ಕಾರಣಕ್ಕೆ ಶಾಲೆಗಳು ಮುಚ್ಚುವ ಮೊದಲು ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ರಾಜ್ಯ ಸರಕಾರ ಕ್ಷೀರಭಾಗ್ಯ ಯೋಜನೆಯ ಅಡಿಯಲ್ಲಿ ಬೆಳಗ್ಗೆ ಬಿಸಿಹಾಲು ಮತ್ತು ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿತ್ತು. ಮಾರ್ಚ್ ನಿಂದ ಮೇ ವರೆಗೆ ಇದ್ದಂಥ ದಾಸ್ತಾನಿನಿಂದ ಹಾಲಿನಪುಡಿ ಮತ್ತು ಒಣ ಪಡಿತರವನ್ನು ಬಿಸಿಯೂಟದ ಬದಲಿಗೆ ಮಕ್ಕಳಿಗೆ ಪೂರೈಸಲಾಯಿತು. ಜೂನ್ ನ ನಂತರ ಈ ಎರಡೂ ಯೋಜನೆಯ ಅಡಿಯಲ್ಲಿ ನೀಡುತ್ತಿದ್ದ ಆಹಾರವನ್ನು ಏಕಾಏಕಿ ನಿಲ್ಲಿಸಿ, ಮಕ್ಕಳ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಆಗ ನಾಗರಿಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದು, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲೂ ಪ್ರಸ್ತಾಪವಾಗಿ ಉಚ್ಛ ನ್ಯಾಯಾಲಯ ಕರ್ನಾಟಕ ಸರಕಾರಕ್ಕೆ ತಕ್ಷಣ ಇವೆರಡೂ ಯೋಜನೆಯನ್ನು ಮಕ್ಕಳಿಗೆ ಹಾಲಿನಪುಡಿ ‌ಮತ್ತು ಬಿಸಿಯೂಟ ಕೊಡುವಂತೆ ಆದೇಶ ನೀಡಿತು. ಆದರೆ ಸರಕಾರ ಹಾಲಾಗಲಿ, ಹಾಲಿನ ಪುಡಿಯನ್ನಾಗಲಿ‌ ನೀಡುತ್ತಿಲ್ಲ.

ಹಾಲು ಹೇರಳ ಜೀವಸತ್ವ, ಖನಿಜಾಂಶಗಳನ್ನು ಒಳಗೊಂಡಿದ್ದು ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಕ್ಯಾಲ್ಸಿಯಂ ಭರಿತ ಪದಾರ್ಥವೂ ಆಗಿದೆ. ಇದರ ಕೊರತೆಯಾದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. National Institute of Nutrition, Hyderabad ನೀಡಿದ ವರದಿಯಂತೆ ಹಾಲು ಒಂದು ಉತ್ತಮ ಗುಣಮಟ್ಟದ ಪ್ರೊಟೀನ್ ಹೊಂದಿದ , ಸುಲಭವಾಗಿ ಜೀರ್ಣವಾಗಬಲ್ಲ ಆಹಾರ. ಮಾಂಸಾಹಾರಿಗಳಾಗಿದ್ದಲ್ಲಿ ಪ್ರತಿನಿತ್ಯ ೨೦೦ ಮಿಲೀ ನಿಂದ ೩೭೦ ಮಿಲಿ ಲೀಟರ್ , ಸಸ್ಯಾಹಾರಿಗಳಾದಲ್ಲಿ ೩೦೦ ml ನಿಂದ ೫೦೦ ml ಅಗತ್ಯವಿದೆ ಎಂದಿದೆ ಈ ವರದಿ.

ಕೋವಿಡ್ ೧೯ ಸಾಂಕ್ರಾಮಿಕ ಬರುವ ಮೊದಲೂ ಪ್ರೊಟೀನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯಿರುವ ಮಕ್ಜಳ ಸಂಖ್ಯೆ ಕರ್ನಾಟಕದಲ್ಲಿ ಅತಿ ಹೆಚ್ಚು ಇತ್ತು ಎಂದು ಸಮಗ್ರ ರಾಷ್ಟ್ರೀಯ ಪೋಷಕಾಂಶ ಸಮೀಕ್ಷೆ-೨೦೧೮ ವರದಿ ಹೇಳಿದೆ. ಇವರಲ್ಲಿ ಶೇಕಡಾ ೯೪ ಮಕ್ಕಳು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು ದಲಿತ, ಆದಿವಾಸಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರುದ ಮಕ್ಕಳು. ಇದು ಆಘಾತಕಾರಿ ವಿಷಯ. ಒಂದೆಡೆ ಲಾಕ್ ಡೌನ್ ನಿಂದಾಗಿ ಕೆಕಸ ಕಳೆದುಕೊಂಡು ಆದಾಯ ಇಲ್ಲದೆ, ಸರಿಯಾದ ಆಹಾರವಿಲ್ಲದೆ ಮಕ್ಕಳ ಅನಾರೋಗ್ಯ ಹೆಚ್ಚುತ್ತಿದ್ದರೆ ಇತ್ತ ಕ್ಷೀರಭಾಗ್ಯ ಯೋಜನೆಯನ್ನೂ ನಿಲ್ಲಿಸಿ ಮಕ್ಕಳ ಆರೋಗ್ಯವನ್ನು ಖುದ್ದು ಸರಕಾರವೇ ಇನ್ನಷ್ಟು ಹದಗೆಡಿಸಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ಪ್ರತಿನಿಧಿಗಳ ತಂಡ ಕ್ಷೀರಭಾಗ್ಯ ಯೋಜನೆಯನ್ನು ಮತ್ತೆ ಆರಂಭಿಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಕರ್ನಾಟಕ ಹಾಲು ಒಕ್ಕೂಟ ದಲ್ಲಿ ಸಾಕಷ್ಟು ಹಾಲು ಸಂಗ್ರಹವಾಗುತ್ತಿದ್ದು ಇದನ್ನು ಸರಕಾರಿ ಶಾಲಾ ಮಕ್ಕಳಿಗೆ ವಿತರಿಸಿ ಮಕ್ಕಳನ್ನು ಕೋವಿಡ್ ೧೯ ಮತ್ತು ಇತರ ಅನಾರೋಗ್ಯ ದಿಂದ ರಕ್ಷಿಸಿ ಎಂದು ಸರಕಾರದ ಗಮನಸೆಳೆದಿದ್ದಾರೆ.
ಕೋವಿಡ್ ೧೯ ಪಿಡುಗಿನ ವಿರುದ್ಧದ ಹೋರಾಟದ ಅಗತ್ಯ ಎಷ್ಟಿದೆಯೋ ಅಷ್ಟೇ ತುರ್ತು ಮಕ್ಕಳ ಅಪೌಷ್ಟಿಕತೆ, ಅನಾರೋಗ್ಯದ ವಿರುದ್ಧ ವೂ ಸರಕಾರ ಸಮರ ಸಾರಲೇಬೇಕಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ ಭಾರತದಲ್ಲಿ ಮಕ್ಕಳಿಗೆ ಹಾಲು ನಿರಾಕರಿಸಲಾಗಿದೆಯೆಂದರೆ ಇದರಿಂದ ದೊಡ್ಡ ವಿಪರ್ಯಾಸ ಇನ್ನೊಂದಿಲ್ಲ. ಹಾಗಾಗಿ ಕರ್ನಾಟಕ ಸರಕಾರ ಕ್ಷೀರಭಾಗ್ಯ ಯೋಜನೆ ಪುನಃ ಆರಂಭಿಸಿ ಬಡ ಮಕ್ಕಳ ಆರೋಗ್ಯವನ್ನು ಕಾಯ್ದುಕೊಳ್ಳಬೇಕೆಂದು ನಾಗರಿಕ ಸಮಾಜ ಒತ್ತಾಯಿಸುತ್ತದೆ. ಇದು ಒಂದು ಜವಾಬ್ದಾರಿಯುತ ಸರಕಾರದ ಕರ್ತವ್ಯವೂ ಹೌದು.

Files

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s