ಭಾರತದಲ್ಲಿ ಮಾಂಸ ಮಾರಾಟ ಮತ್ತು ಸೇವನೆಯನ್ನು ಗುರಿಪಡಿಸುವುದು ಆಹಾರ ಮತ್ತು ಪೌಷ್ಟಿಕಾಂಶ ಹಕ್ಕಿನ ಮೇಲೆ ನಡೆಯುವ ದಾಳಿಯಾಗಿದೆ.

ಇತ್ತೀಚೆಗೆ ಮಾಂಸ ಮಾರಾಟ ಹಾಗೂ ಸೇವನೆಯ ವಿರುದ್ಧ ಕಾನೂನು, ನಿಷೇಧ ಹಾಗೂ ಬಹಿಷ್ಕಾರಗಳನ್ನು ಹಾಕುವ ಮೂಲಕ, ಬಡವರ ಆಹಾರ ಮತ್ತು ಪೌಷ್ಟಿಕಾಂಶದ ಹಕ್ಕಿನ ಮೇಲೆ ಅತಾರ್ಕಿಕ ದಾಳಿಯನ್ನು ನಡೆಸುತ್ತಿರುವುದರ ಕುರಿತು ಸಾಮಾಜಿಕ ಕಾರ್ಯಕರ್ತರು, ವೈದ್ಯರು, ಪೌಷ್ಟಿಕಾಂಶ ತಜ್ಞರು, ಪೋಷಕರು, ವಕೀಲರು ಹಾಗೂ ಸಂಶೋಧಕರಾದ ನಾವು ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತಿದ್ದೇವೆ. ಮಾಂಸವನ್ನು ನಿಷೇಧಿಸುವುದು ಹಾಗೂ ಬಹಿಷ್ಕರಿಸುವುವ ಕರೆಗಳು ಸಧ್ಯಕ್ಕೆ ಅಲ್ಲೊಂದು ಇಲ್ಲೊಂದು ಎಂಬಂತೆ ಕಂಡರೂ ಸಹ ಜನರ ಆಹಾರ ಹಾಗೂ ಜೀವನೋಪಾಯದಲ್ಲಿ ತಲೆಯಿಡುವ ಸಂಸ್ಕೃತಿಯನ್ನು ನಾವು ಈಗ ಕೊನೆಗಾಣಿಸದಿದ್ದರೆ, ಮುಂದೆ ಇದು ಗಂಭೀರ ಸಾಮಾಜಿಕ, ಆರ್ಥಿಕ ಹಾಗೂ ಪೌಷ್ಟಿಕಾಂಶಕ ಪರಿಣಾಮಗಳನ್ನು ಬೀರಲಿದೆ.
ಭಾರತದ ಪೌಷ್ಟಿಕಾಂಶ ಅಂಕಿಅಂಶಗಳು
ಭಾರತದಲ್ಲಿನ ಪೌಷ್ಟಿಕಾಂಶದ ಕುರಿತ ಅಂಕಿಅಂಶಗಳು ಪ್ರಪಾತಕ್ಕೆ ಕುಸಿದಿವೆ. ಕಾಂಪ್ರೆಹೆನ್ಸಿವ್ ನ್ಯಾಷನಲ್ ನ್ಯೂಟ್ರಿಷನ್ ಸಮೀಕ್ಷೆ (ಸಿಎನ್‌ಎನ್‌ಎಸ್) 2016-18 ರ ದತ್ತಾಂಶದ ಪ್ರಕಾರ 6 ರಿಂದ 23 ತಿಂಗಳುಗಳ ವಯಸ್ಸಿನ ಮಕ್ಕಳಲ್ಲಿ ಶೇ. 42% ರಷ್ಟು ಮಕ್ಕಳು ಮಾತ್ರ ಅವರ ವಯಸ್ಸಿಗೆ ತಕ್ಕಂತೆ ಒಂದು ದಿನದಲ್ಲಿ ಕನಿಷ್ಟ ಸಂಖ್ಯೆಯಷ್ಟು ಮಾತ್ರ ಆಹಾರವನ್ನು ಸೇವಿಸಿರುತ್ತಾರೆ. ಶೇ.21 ರಷ್ಟು ಮಕ್ಕಳು ಸರಿಯಾದ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಆಹಾರ ರೀತಿಯನ್ನು ಹೊಂದಿದ ವೈವಿಧ್ಯಮಯ ಆಹಾರವನ್ನು ಸೇವಿಸಿದರೆ, ಕೇವಲ 6.4% ರಷ್ಟು ಮಕ್ಕಳು ಮಾತ್ರ ಕನಿಷ್ಟ ಒಪ್ಪಿಗೆಯ ಆಹಾರವನ್ನು ಸೇವಿಸಿರುತ್ತಾರೆ.
2 ರಿಂದ 4 ವರ್ಷದೊಳಗಿನ ಮಕ್ಕಳಲ್ಲಿ, ಶೇ. 96% ರಷ್ಟು ಮಕ್ಕಳು ಕಾಳುಗಳು, ಬೇರುಗಳು ಮತ್ತು ಗೆಡ್ಡೆಗಳನ್ನು ಸೇವಿಸಿದರೆ, ಶೇ. 62% ರಷ್ಟು ಮಕ್ಕಳು ಹಾಲಿನ ಉತ್ಪನ್ನಗಳನ್ನು ಹಾಗೂ ಶೇ. 5% ರಷ್ಟು ಮಕ್ಕಳು ಮಾತ್ರ ವಿಟಮಿನ್-ಎ ಸಂಪತ್ಭರಿತ ಆಹಾರವನ್ನು ಹಿಂದಿನ ದಿನ ಸೇವಿಸಿರುತ್ತಾರೆ. ಮುಂದುವರೆದು, ಶೇ. 16% ಮಕ್ಕಳು ಮೊಟ್ಟೆಗಳನ್ನು ಸೇವಿಸಿದ್ದರೆ, ಶೇ. 1% ರಷ್ಟು ಮಕ್ಕಳು ಮಾಂಸವನ್ನು ಸೇವಿಸಿರುತ್ತಾರೆ. ಹರೆಯದ ಮಕ್ಕಳಲ್ಲಿ ಶೇ. 35% ರಷ್ಟು ಮಾತ್ರ ಮೊಟ್ಟೆಯನ್ನು ಹಾಗೂ ಶೇ. 36% ರಷ್ಟು ಮಕ್ಕಳು ಮೀನು, ಕೋಳಿ ಹಾಗೂ ಇತರೆ ಮಾಂಸವನ್ನು ಸೇವಿಸಿರುತ್ತಾರೆ.
ಅದೇ ರೀತಿ, ಸಿಎನ್‌ಎನ್‌ಎಸ್ ಪ್ರಕಾರ, ಭಾರತದಲ್ಲಿನ 0 – 4 ವರ್ಷದವರೆಗಿನ ಮಕ್ಕಳಲ್ಲಿ ಶೇ. 35% ರಷ್ಟು ಮಕ್ಕಳ ಬೆಳವಣಿಗೆಯು ಅವರ ವಯೋಮಾನ ಹಾಗೂ ಎತ್ತರದ ಅಂಶಗಳಿಗೆ ಹೋಲಿಸಿದರೆ ಕುಂಠಿತವಾಗಿದೆ. ಶೇ. 33% ರಷ್ಟು ಮಕ್ಕಳು ನಿಗಧಿತ ತೂಕಕ್ಕಿಂತ ಕಡಿಮೆ ಇದ್ದು, ಈ ಅಂಕಿಅಂಶಗಳು ಬಿಹಾರ, ಝಾರ್ಖಂಡ್, ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲೇ ಅಧಿಕವಾಗಿದೆ. ಅತಿ ಶ್ರೀಮಂತ ಗುಂಪಿನಲ್ಲಿರುವ ಮಕ್ಕಳ (ಶೇ. 19%) ಅಂಕಿಅಂಶಗಳಿಗೆ ಹೋಲಿಸಿದರೆ, ಅತೀವ ಬಡತನದ ಗುಂಪಿನಲ್ಲಿರುವ ಮಕ್ಕಳ (ಶೇ. 49%) ಬೆಳವಣಿಗೆಯು ಕುಂಠಿತವಾಗುವ ಸಾಧ್ಯತೆಗಳು ಹೆಚ್ಚು. ಅದೇ ರೀತಿ, ಪರಿಶಿಷ್ಟ ಜಾತಿಗಳ ಮಕ್ಕಳ (ಶೇ. 36%), ಇತರೆ ಹಿಂದುಳಿದ ವರ್ಗಗಳ ಮಕ್ಕಳ (ಶೇ. 33%) ಹಾಗೂ ಇತರೆ ಗುಂಪುಗಳ ಮಕ್ಕಳ (ಶೇ. 27%) ತೂಕಕ್ಕೆ ಹೋಲಿಸಿದರೆ, ಪರಿಶಿಷ್ಟ ಪಂಗಡಗಳ ಮಕ್ಕಳು (ಶೇ. 42%) ನಿಗಧಿತ ತೂಕಕ್ಕಿಂತ ಕಡಿಮೆ ಇರುತ್ತಾರೆ ಎಂಬುದನ್ನು ಸಮೀಕ್ಷೆಯು ಬಹಿರಂಗಪಡಿಸಿದೆ.
ಅನೀಮಿಯ ಅಥವಾ ರಕ್ತಹೀನತೆ ಎನ್ನುವುದು ಕೇರಳವನ್ನು ಹೊರತುಪಡಿಸಿ, ಮಿಕ್ಕೆಲ್ಲ ರಾಜ್ಯಗಳಲ್ಲಿನ ಶಾಲೆಗೆ ಹೋಗುವ 5-9 ವರ್ಷದೊಳಗಿನ ಮಕ್ಕಳಿಗೆ ಕನಿಷ್ಠ, ಹಾಗೂ 3-5 ವರ್ಷದೊಳಗಿನ, ಈಗಷ್ಟೇ ಶಾಲೆಗೆ ಹೋಗಲು ಸಜ್ಜಾಗಿರುವ ಮಕ್ಕಳಿಗೆ ಮಧ್ಯಮ ಹಾಗೂ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಮಕ್ಕಳಲ್ಲಿ ಅನೀಮಿಯ ಎಂಬುದು ಅವರಲ್ಲಿ ಭೌದ್ಧಿಕ ಅಭಿವೃದ್ಧಿಗೆ ಮಾರಕವಾಗಿ, ಅವರು ದೈಹಿಕವಾಗಿ ಸಂಪೂರ್ಣ ಬೆಳವಣಿಗೆ ಹೊಂದದೆ ನ್ಯೂನತೆಗಳನ್ನು ಹಾಗೂ ಅವರು ವಯಸ್ಕರಾದಾಗ ತಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡದಂತೆ ತಡೆಯಬಹುದಾದ ಆರೋಗ್ಯ ಸಮಸ್ಯೆಯಾಗಿದೆ. (FAO/WHO, 2005).
ಕಬ್ಬಿಣಾಂಶ, ವಿಟಮಿನ್ ಎ, ಐಯೋಡೀನ್, ಜಿಂಕ್, ವಿಟಮಿನ್ ಬಿ, ಹಾಗೂ ವಿಟಮಿನ್ ಡಿ ಗಳು ಸಾಮಾನ್ಯವಾಗಿ ಮಕ್ಕಳ ಬಾಲ್ಯ ಹಾಗೂ ಹರೆಯದಲ್ಲಿ ಅವರ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಆದರೆ, ಭಾರತದ ಬಹುತೇಕ ಮಕ್ಕಳಲ್ಲಿ ಈ ಪೋಷಕಾಂಶಗಳ ಅತೀವ ಕೊರತೆಯಿದೆ. ಉದಾಹರಣೆಗೆ, 1 ರಿಂದ 4 ವರ್ಷದೊಳಗಿನ ಮಕ್ಕಳಲ್ಲಿ ಶೇ. 18% ವಿಟಮಿನ್ಎ ಪೋಷಕಾಂಶದ ಕೊರತೆ ಕಂಡುಬಂದರೆ, 5 ರಿಂದ 9 ವರ್ಷದೊಳಗಿನ ಶಾಲೆಗೆ ಹೋಗುವ ಮಕ್ಕಳಲ್ಲಿ ಶೇ. 22%, 10 ರಿಂದ 19 ವರ್ಷದೊಳಗಿನ ಹರೆಯದ ಮಕ್ಕಳಲ್ಲಿ ಈ ಪೋಷಕಾಂಶದ ಕೊರತೆ ಶೇ. 16% ರಷ್ಟಿದೆ. ಮೂಳೆಗಳ ಆರೋಗ್ಯಕ್ಕೆ ಸಂಬಂಧಿಸಿದ ವಿಟಮಿನ್ ಡಿ ಪೋಷಕಾಂಶವು ಕ್ರಮವಾಗಿ ಈ ವಯೋಮಾನದ ಮಕ್ಕಳಲ್ಲಿ ಶೇ. 14, 18 ಮತ್ತು 24% ರಷ್ಟಿದೆ. ಬೆಳವಣಿಗೆ ಕುಂಠಿತ, ಹಸಿವಾಗದಿರುವಿಕೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿಗೆ ಕಾರಣವಾಗಿವ ಜಿಂಕ್ ಪೋಷಕಾಂಶದ ಕೊರತೆಯು ಈ ವಯೋಮಾನ ಗುಂಪುಗಳ ಮಕ್ಕಳಲ್ಲಿ ಕ್ರಮವಾಗಿ ಶೇ. 19, 17 ಮತತು 32% ರಷ್ಟಿದೆ.
ಆಹಾರ ವೈವಿಧ್ಯತೆ ಹಾಗೂ ಪ್ರಾಣಿ ಮೂಲದಿಂದ ಆಹಾರದ ಅವಶ್ಯಕತೆ
ಪೌಷ್ಟಿಕಾಂಶ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಆಹಾರ ವೈವಿಧ್ಯತೆ ಮತ್ತು ಪ್ರಾಣಿಮೂಲ ಆಹಾರಗಳು ಅತ್ಯುತ್ತಮ ಆಹಾರ ವಿಧಾನಗಳಾಗಿವೆ.
ಸಾಕಷ್ಟು ಸಂಶೋಧನಾ ಪುರಾವೆಗಳು ಹೇಳುವ ಪ್ರಕಾರ, ಪೌಷ್ಟಿಕಾಂಶ ಕೊರತೆಯನ್ನು ಹೋಗಲಾಡಿಸಲು ರಾಗಿ ಮತ್ತು ಧಾನ್ಯಗಳ ಹೊರತಾಗಿ ಸಾಕಷ್ಟು ಪ್ರಮಾಣದಲ್ಲಿ ವೈವಿಧ್ಯಮಯ ಆಹಾರಗಳಾದ ಮೊಟ್ಟೆ, ಮಾಂಸ, ಹಾಲು, ಮೀನು, ತರಕಾರಿಗಳು, ಕೊಬ್ಬಿನಾಂಶ, ಕಾಳುಗಳು, ಬೀಜಗಳು,ಎಣ್ಣೆ, ಚಿಕನ್, ಎಲೆ ತರಕಾರಿಗಳು ಮುಂತಾದವುಗಳನ್ನು ಸೇವಿಸಬೇಕು.
ಯುನಿಸೆಫ್ 135 ದೇಶಗಳಿಂದ ಮಕ್ಕಳ ಪೌಷ್ಟಿಕಾಂಶ ವರದಿ 2021 ಅನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ವೈವಿಧ್ಯಮಯ, ಪ್ರಾಣಿಮೂಲ ಆಹಾರ, ತರಕಾರಿಗಳು, ಹಣ್ಣುಗಳು, ಎದೆ ಹಾಲು ಇತ್ಯಾದಿಗಳನ್ನು ಈ ದೇಶಗಳ ಮಕ್ಕಳಿಗೆ ನೀಡುವ ಅಗತ್ಯವಿದೆ ಎಂದು ಯುನಿಸೆಫ್ ಉಲ್ಲೇಖಿಸಿದೆ. ಜನಸಂಖ್ಯೆಯ ಬಹುತೇಕ ಭಾಗವು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ಅವರಿಗೆ ಅನೇಕ ವಿಧದ ಪೋಷಕಾಂಶಗಳ ಕೊರತೆ ಇದೆ ಎಂದು ಹೇಳಬಹುದು. ಕೇವಲ ಒಂದೆರಡು ಪೌಷ್ಟಿಕಾಂಶ ಕೊರತೆಗಳು ಮಾತ್ರ ಮೇಲ್ನೋಟಕ್ಕೆ ಕಂಡುಬಂದರೆ ಅದರ ಅರ್ಥ ಅವರಿಗೆ ಈ ಪೋಷಕಾಂಶಗಳನ್ನು ಮಾತ್ರವೇ ನೀಡುವುದು ಸಮಂಜಸವಾಗಿರುವುದಿಲ್ಲ. ಜನರಿಗೆ ಎಲ್ಲವನ್ನೂ ಒಳಗೊಳ್ಳುವ ವೈವಿಧ್ಯಮಯ ಆಹಾರಗಳಾದ ಮೊಟ್ಟೆ, ಮಾಂಸ, ಹಾಲು, ಮೀನು, ಕಾಳುಗಳು, ಬೀಜಗಳು, ತರಕಾರಿಗಳು, ಕೊಬ್ಬಿನಾಂಶ, ಎಣ್ಣೆ, ಚಿಕನ್, ಎಲೆ ತರಕಾರಿಗಳ ಅವಶ್ಯಕತೆಯಿದೆ.
ಸೂಕ್ಷ್ಮ ಪೌಷ್ಟಿಕಾಂಶ ಕೊರತೆಗಳಿಗೆ (ಕಬ್ಬಿಣಾಂಶ, ಜಿಂಕ್, ವಿಟಮಿನ್ ಎ, ಬಿ12, ಫೋಲೆಟ್ ಮತ್ತು ಕ್ಯಾಲ್ಷಿಯಂ) ಪ್ರಾದೇಶಿಕವಾಗಿ ದೊರೆಯುವಂತಹ ಪೌಷ್ಟಿಕಾಂಶಯುಕ್ತ ಆಹಾರಗಳೆಂದರೆ ಚಿಕನ್ ಲಿವರ್ (ಈಲಿ), ಕುರಿ/ಆಡುಗಳ/ಜಾನುವಾರು ಲಿವರ್, ಚಿಕ್ಕ ಮೀನುಗಳು (ವಿಟಮಿನ್ ಡಿ ಹಾಗೂ ಲಾಂಗ್‌ಚೈನ್ ಒಮೆಗಾ 3 ಕೊಬ್ಬಿನಾಂಶಗಳು). ಮೊಟ್ಟೆ, ಮಾಂಸ, ಹಚ್ಚ ಹಸಿರೆಲೆ ತರಕಾರಿಗಳು ಉಪಯುಕ್ತವಾಗುತ್ತವೆ. ಸಿಎನ್‌ಎನ್‌ಎಸ್ ವರದಿ ನಿರ್ದಿಷ್ಟವಾಗಿ ಕಬ್ಬಿಣಾಂಶ ಆಹಾರಗಳು “ಪ್ರಾಣಿಯ ಲಿವರ್, ಕಿಡ್ನಿ, ಹೃದಯ ಹಾಗೂ ಯಾವುದೇ ಪ್ರಾಣಿಯ ಯಾವುದೇ ಭಾಗದ ಮಾಂಸ, ಯಾವುದೇ ಕೋಳಿ, ಬಾತುಕೋಳಿ ಅಥವಾ ಇನ್ನಿತರ ಕೋಳಿ ಮಾಂಸಗಳು, ಯಾವುದೇ ತಾಜಾ ಅಥವಾ ಒಣಮೀನು, ಚಿಪ್ಪುಮೀನು, ಅಥವಾ ಯಾವುದೇ ರೀತಿಯ ಮಾಂಸ ಸೇವನೆಯನ್ನು ಶಿಫಾರಸು ಮಾಡಬೇಕು ಎಂದು ಹೇಳುತ್ತದೆ
ಇತ್ತೀಚೆಗಿನ ಆಹಾರ ಮತ್ತು ಕೃಷಿ ಸಂಸ್ಥೆ (FAO) ವರದಿಯಲ್ಲಿ ದಕ್ಷಿಣ ಏಷಿಯಾವು ಮಾಂಸ ಲಭ್ಯತೆಯ (Per capita availability) (ದಿನಕ್ಕೆ 19 ಗ್ರಾಂ) ಅತಿ ಕಡಿಮೆ ತಲಾವಾರು ಹೊಂದಿದೆ ಎಂಬುದನ್ನು ಬಹಿರಂಗಪಡಿಸಿದೆ. ಕಳವಳಕಾರಿ ಅಂಶವೆಂದರೆ, ದಕ್ಷಿಣ ಏಷಿಯಾ ದೇಶಗಳಲ್ಲೇ ಭಾರತವೇ ಅತಿ ಕಡಿಮೆ ಮಾಂಸ ಲಭ್ಯತೆ (ದಿನಕ್ಕೆ 10 ಗ್ರಾಂ) ಯನ್ನು ಹೊಂದಿದೆ. 6 ರಿಂದ 23 ತಿಂಗಳುಗಳ ವಯೋಮಾನದಲ್ಲಿನ ಮಕ್ಕಳಿಗೆ ನೀಡುವ ಚಿಕನ್ ಲಿವರ್, ಕುರಿ-ಆಡುಗಳ ಲಿವರ್ ಹಾಗೂ ಮಾಂಸವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಹೋರಾಟಗಳು ನಡೆಯಬೇಕು ಎಂಬುದನ್ನು ಈ ವರದಿಯು ಉಲ್ಲೇಖಿಸುತ್ತದೆ. ಹಸಿರು ತರಕಾರಿಗಳು ಮಿತವಾಗಿ ಲಭ್ಯವಿದ್ದು, ಮೀನುಗಳನ್ನು ನಿರ್ದಿಷ್ಟ ಪ್ರದೇಶದ ಜನರು ಮಾತ್ರ ಸೇವಿಸುತ್ತಾರೆ ಎಂಬುದನ್ನು ಹೇಳುತ್ತದೆಯಲ್ಲದೆ, ಮೊಟ್ಟೆಯ ಸೇವನೆಯನ್ನು ಮತ್ತಷ್ಟು ಅಧಿಕರಿಸಬೇಕು ಎಂದೂ ಅಹ ಅಭಿಪ್ರಾಯಪಡುತ್ತದೆ.
ಭಾರತ ಸಸ್ಯಹಾರಿ ದೇಶ ಎಂದು ಭಾವಿಸಿರುವುದಕ್ಕೆ ವಿರುದ್ಧವಾಗಿ, ಭಾರತವು ಸಮೃದ್ಧ ಮಾಂಸಾಹಾರ ಸೇವನೆಯ ಹಾಗೂ ಮಾಂಸಾಹಾರ ಪದ್ಧತಿಯ ಇತಿಹಾಸವನ್ನು ಹೊಂದಿದೆ. ಕೇವಲ 20% ಭಾರತೀಯರು ಮಾತ್ರ ತಾವು ಸಸ್ಯಹಾರಿಗಳೆಂದು ಗುರುತಿಸಿಕೊಳ್ಳುತ್ತಾರೆ ಹಾಗೂ ಅಂತವರು ಪ್ರಾಣಿಜನ್ಯ (Animal source food) ಆಹಾರಗಳಾದ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸುತ್ತಾರೆ. ಭೀಫ್ ಅಥವಾ
ಜಾನುವಾರು ಮಾಂಸ ಸೇವಿಸುವುದು ದಲಿತರು, ಆದಿವಾಸಿಗಳು, ಮುಸ್ಲಿಂರು, ಕ್ರೆöÊಸ್ತರು ಹಾಗೂ ಸ್ವಲ್ಪ ಪ್ರಮಾಣದ ಇತರೆ ಹಿಂದುಳಿದ ವರ್ಗಗಳ ಜನರೂ ಸೇರಿದಂತೆ ಸಹ ಶೇ, 15% ಅಥವಾ 180 ಲಕ್ಷ ಭಾರತೀಯರ ಸಾಂಸ್ಕೃತಿಕ ಆಚರಣೆಯ ಭಾಗವಾಗಿದೆ. ಭೀಫ್ ಕಡಿಮೆ ಬೆಲೆಯಲ್ಲಿ ದೊರೆಯುವ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಕೇವಲ 100 ಗ್ರಾಂನಷ್ಟು ಭೀಫ್, ದೈನಂದಿನ ಅಗತ್ಯಕ್ಕೆ ಬೇಕಾದ ಶೇ. 54% ರಷ್ಟು ಪ್ರೊಟೀನ್ ಅನ್ನು ನೀಡುತ್ತದೆ ಹಾಗೂ ಇದರ ಪೌಷ್ಟಿಕಾಂಶಗಳು ಜೀರ್ಣಿಸಿಕೊಳ್ಳಬಹುದಾದವುಗಳಾಗಿವೆ. ಅನೇಕ ಸಂದರ್ಭಗಳಲ್ಲಿ ಬಹುತೇಕ ಜನರಿಗೆ ಮಾಂಸವನ್ನು ಖರೀದಿಸಲು ಸಾಧ್ಯವಾಗದಿರುವುದು ಬೇರೆ ಮಾತು.
ಮಾಂಸ ಮಾರಾಟಗಾರರು ಹಾಗೂ ಮಾಂಸ ಸೇವಿಸುವವರನ್ನು ಗುರಿಪಡಿಸುವುದು.
ಭಾರತದಲ್ಲಿನ ಪೌಷ್ಟಿಕಾಂಶ ಕೊರತೆಯನ್ನು ಹೋಗಲಾಡಿಸುವುದಕ್ಕೆ ಹೆಚ್ಚು ಹೆಚ್ಚಾಗಿ ಪ್ರಾಣಿ ಮೂಲ ಆಹಾರಗಳನ್ನು ಸೇವಿಸುವುದೊಂದೇ ಪರಿಹಾರ ಎಂದು ಸಂಶೋಧನೆಗಳು ಹೇಳುತ್ತಿದ್ದರೆ, ಇತ್ತ ಕೇಂದ್ರ ಸರ್ಕಾರ, ಅದರ ಬಲಪಂಥೀಯ ಕಾಲ್ದಳದ ಸೈನಿಕರು, ಮಾರಿಕೊಂಡ ಮಾಧ್ಯಮಗಳು ಹಾಗೂ ಎಲ್ಲ ಗೊತ್ತಿದ್ದೂ ಸುಮ್ಮನಿರುವ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ, ಸಾಮಾನ್ಯ ಭಾರತೀಯನ ತಟ್ಟೆಯಿಂದ ಡೈರಿ ಉತ್ಪನ್ನಗಳನ್ನು ಬಿಟ್ಟು, ಪ್ರಾಣಿಮೂಲ ಆಹಾರಗಳನ್ನು ಕಸಿದುಕೊಳ್ಳುವಲ್ಲಿ ಎಡೆಬಿಡದೆ ಕಾರ್ಯನಿರ್ವಹಿಸುತ್ತಿವೆ. ಇದು ಮತ್ತೆ ಸರಿಪಡಿಸಲಾಗದಂತಹ ಪರಿಣಾಮಗಳನ್ನು ಬೀರುವುದನ್ನು ಅಲ್ಲಗಳೆಯುವಂತಿಲ್ಲ.
ಮಾಂಸದಂಗಡಿಗಳನ್ನು ನಿಷೇಧಿಸುವ ಕರೆಗಳು ದೇಶದಾದ್ಯಂತ ವ್ಯಾಪಸಿಕೊಳ್ಳುತ್ತಿವೆ. ಏಪ್ರಿಲ್ 01, 2022 ರಂದು ಉತ್ತರ ಪ್ರದೇಶದಲ್ಲಿ ನವರಾತ್ರಿಯ ಹಿನ್ನೆಲೆ ಒಂಬತ್ತು ದಿನಗಳ ಕಾಲ ಮಾಸಂದಂಗಡಿಗಳನ್ನು ಮುಚ್ಚುವಂತೆ ಕರೆನೀಡಲಾಯಿತು. ಇದಕ್ಕೆ ಒಪ್ಪಿಕೊಳ್ಳದ ಮಾಂಸದಂಗಡಿ ಮಾಲೀಕರ ಅಂಗಡಿಗಳನ್ನು ಬುಲ್ಡೋಜರ್‌ನಿಂದ ನಾಶಪಡಿಸುವ ಬೆದರಿಕೆಯನ್ನು ಒಡ್ಡಲಾಯಿತು. ಉತ್ತರ ಪ್ರದೇಶದಲ್ಲಿ ಈ ಮೊದಲೂ ಸಹ, ಅಂದರೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಮೊದಲನೇ ದಿನದಿಂದಲೂ ಸಹ ಮಾಸಂದಗಡಿಗಳನ್ನು ನಿಷೇಧಿಸುವ ಕರೆಗಳು ಹಾಗೂ ಅದಕ್ಕೆ ಪೂರಕವಾದ ಪ್ರಯತ್ನಗಳೂ ಸಹ ನಡೆಯುತ್ತಲೇ ಇವೆ. ಇದಲ್ಲದೆ, ಜಾರ್ಖಂಡ್ ಹಾಗೂ ಕರ್ನಾಟಕದಲ್ಲಿಯೂ ಸಹ ಮಾಂಸದಂಗಡಿಗಳನ್ನು ನಿಷೇಧಿಸುವುದರ ಕರೆಗಳು ಸಹ ಮೊಳಗುತ್ತಿವೆ.
ಮಾಂಸ ಎಂದರೆ ಗಲೀಜು, ಅಶುದ್ಧ ಹಾಗೂ ರೋಗಗಳು ಬರುತ್ತವೆ ಎಂಬ ನಂಬಿಕೆಯು ಆಳವಾಗಿ ಬೇರೂರಿ, ಇದು “ಮಾಲಿನ್ಯ ದ್ವೇಷಿ” ಮೇಲ್ಜಾತಿಗಳ ಕಲ್ಪನೆಯನ್ನು ಸೆರೆಹಿಡಿಯುತ್ತದೆ. ಅಂದರೆ ಅವರ ಈ ಭಾವನೆಗಳ ಪ್ರಕಾರ ಮಾಂಸ ಮಾರುವವರನ್ನು ಥಳಿಸುವುದು, ಗುಂಪುಹಿಂಸೆಗಳು, ಮಾಂಸದಂಗಡಿಗಳನ್ನು ಒಡೆದು, ನಾಶಮಾಡುವುದೆಲ್ಲವೂ ಸ್ವಚ್ಛತಾ ಅಭಿಯಾನದಂತೆ ಕಾಣುತ್ತದೆ.
ಇಸ್ಕಾನ್ ಸಂಸ್ಥೆಯ ಸಹಯೋಗವನ್ನು ಹೊಂದಿರುವ ಅಕ್ಷಯಪಾತ್ರೆಯಂತಹ ಸಂಸ್ಥೆಗಳು ಮೊಟ್ಟೆಯನ್ನೂ ಸೇರಿದಂತೆ ಎಲ್ಲಾ ವಿಧದ ಮಾಂಸಾಹಾರಗಳನ್ನು ತ್ಯಜಿಸಿ, ಸಾರ್ವಜನಿಕವಾಗಿ ಕೇವಲ ಸಾತ್ವಿಕ ಆಹಾರವನ್ನು ಮಾತ್ರ ಪ್ರಚುರಪಡಿಸುತ್ತವೆ. ಈ ಸಂಸ್ಥೆಯು ಸರ್ಕಾರಿ ಅನುದಾನದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿಯೂ ಸಹ, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ, ತಾವು ಸಿದ್ಧಪಡಿಸುವ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನೂ ಸಹ ಬಳಸುವುದಿಲ್ಲ. ಹೀಗೆ ಸಿದ್ಧಪಡಿಸಲಾಗುವ ಅವೈಜ್ಞಾನಿಕ ಹಾಗೂ ಸರಿಯಾದ ಪೌಷ್ಟಿಕಾಂಶಗಳಿಲ್ಲದ ಆಹಾರವನ್ನು ಮಕ್ಕಳ ಮೇಲೆ ಹೇರಲಾಗುತ್ತದೆಯಲ್ಲದೆ, ಅವರಿಗೆ ಉತ್ತಮ ಜೀವನವನ್ನು ರೂಪಿಸುವಂತೆ ಬಿಂಬಿಸುತ್ತಿದ್ದಾರೆ. ಈಗಿರುವ ವೈಜ್ಞಾನಿಕ ಮಾಹಿತಿಯ ಪ್ರಕಾರ, ಈ ರೀತಿ ಮಕ್ಕಳಿಗೆ ಕೇವಲ ಸಾತ್ವಿಕ ಆಹಾರವನ್ನು ನೀಡುವುದು ಅವರನ್ನು ಮತ್ತಷ್ಟು ಅಪೌಷ್ಟಿಕತೆಗೆ ತಳ್ಳುತ್ತದೆ. ಆದರೆ ಆಹಾರ “ಶುದ್ಧ”ವಾಗಿರುವವರೆಗೂ ಇದು ಅವರಿಗೆ ಸಮಸ್ಯೆಯೇ ಅಲ್ಲ.
ಇತ್ತೀಚೆಗೆ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ಕರ್ನಾಟಕದಲ್ಲಿಯೂ ಸಹ ಮಾಂಸ ನಿಷೇಧದ ಕರೆಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಅದರಲ್ಲೂ, ಕರ್ನಾಟಕದಲ್ಲಿ ಇದು ಒಂದು ಹೆಜ್ಜೆ ಮುಂದೆ ಹೋಗಿ, ಹಲಾಲ್ ಮಾಂಸವನ್ನು ನಿಷೇಧಿಸುವ ಹಾಗೂ ಬಹಿಷ್ಕರಿಸುವ ಕರೆಗಳು, ಪ್ರಯತ್ನಗಳು ನಡೆಯುತ್ತಿವೆ. ಮಾಂಸ ನಿಷೇಧಗಳು ಬಲಹೀನ ಸಮುದಾಯಗಳ (ವಿಶೇಷವಾಗಿ ಮುಸ್ಲಿಂರು ಹಾಗೂ ದಲಿತರ) ಮೇಲೆ ಪರಿಣಾಮಗಳನ್ನು ಬೀರುತ್ತವೆ. ಆದರೆ ಇದು ಚುನಾಯಿತ ಪ್ರತಿನಿಧಿಗಳಿಗೆ ಸಮಸ್ಯೆಗಳೆಂದೇ ಕಾಣುತ್ತಿಲ್ಲ. ಏಕೆಂದರೆ ಅವರು ತಾವು ಚುನಾಯಿತರಾಗಿರುವುದೇ ಧಾರ್ಮಿಕ ಹಾಗೂ ಜಾತಿ ಗುಂಪುಗಳ ಅವಶ್ಯಕತೆಗಳನ್ನು ಪೂರೈಸಲು ಎಂದು ನಿರ್ಧರಿಸಿದಂತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಂಸಕ್ಕಿಂತ ಹೆಚ್ಚಾಗಿ, ಮುಸ್ಲಿಂ ಸಮುದಾಯವನ್ನೇ ನೇರವಾಗಿ ಗುರಿಯಾಗಿಸಿಕೊಂಡಿವೆ ಎಂಬುದು ನಡೆಯುತ್ತಿರುವ ಎಲ್ಲಾ ಘಟನೆಗಳಿಂದ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
ಮಾಂಸದ ನಿಷೇಧ ಹಾಗೂ ಮಾಂಸವನ್ನು ಬಹಿಷ್ಕರಿಸಬೇಕು ಎಂಬಂತಹ ಕರೆಗಳು ಈಗಾಗಲೇ ಆರ್ಥಿಕವಾಗಿ ಕುಗ್ಗಿಹೋಗಿರುವ ಸಮುದಾಯಗಳ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ಹಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ಬಂದಿರುವ ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳು ಹಲವು ದಶಕಗಳಿಂದ ಕಾನೂನಾತ್ಮಕವಾಗಿ ನಡೆಯುತ್ತಿದ್ದ ವ್ಯಾಪಾರವನ್ನು ಕಾನೂನುಬಾಹಿರವಾಗಿಸಿ, ಇದರಿಂದಲೇ ಜೀವನೋಪಾಯವನ್ನು ನಡೆಸುತ್ತಿದ್ದ ಸಾವಿರಾರು ಜನರನ್ನು ಅಪರಾಧಿಗಳನ್ನಾಗಿಸಿ, ಇವರನ್ನು ಪೊಲೀಸ್ ದೌರ್ಜನ್ಯಕ್ಕೆ ತುತ್ತಾಗುವಂತೆಯೂ, ಹಲವು ಕಾನೂನಾತ್ಮಕ ಪ್ರಕ್ರಿಯೆಗಳನ್ನು ವಿನಾ ಕಾರಣ ಎದುರಿಸುವಂತೆಯೂ, ಇವರನ್ನು ಬಲವಂತವಾಗಿ ಆರ್ಥಿಕ ಬಡತನಕ್ಕೆ ತಳ್ಳಿ, ಬೀದಿ ರೌಡಿಗಳಿಗಿಂತಲೂ ಕಡೆಯಾದ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಮಗ್ನರಾಗಿರುವ ಸ್ವ-ಘೋಷಿತ “ಗೋರಕ್ಷಕರ” ಹಿಂಸೆ ಮತ್ತು ಹಾವಳಿಯನ್ನು ಎದುರಿಸುವ ಸನ್ನಿವೇಷಗಳನ್ನು ಸೃಷ್ಟಿಸಿವೆ. ಜಾನುವಾರುಗಳ ವ್ಯಾಪರವನ್ನೇ ತಮ್ಮ ಬದುಕಿನ ಜೀವನೋಪಾಯವನ್ನಾಗಿ ಮಾಡಿಕೊಂಡಿರುವವರ ಮೇಲೆ (ರೈತರಿಂದ ಹಿಡಿದು ಜಾನುವಾರು ವ್ಯಾಪಾರಿಗಳು, ಕಸಾಯಿಗಳು, ಮಾರಾಟಗಾರರು ಹಾಗೂ ಕೊಳ್ಳುವವರು) ಈ ಜಾನುವಾರು ಹತ್ಯೆ ನಿಷೇಧವು ಋಣಾತ್ಮಕ ಪರಿಣಾಮಗಳನ್ನು ಬೀರಿದೆ. ಇದಲ್ಲದೆ, ಜಾನುವಾರು, ಚರ್ಮ ಉದ್ಯಮ ಹಾಗೂ ಮಾಂಸ ಉದ್ಯಮಗಳಿಗೆ ಆರ್ಥಿಕ ಹೊಡೆತವನ್ನು ನೀಡಿದೆ. ಜಾನುವಾರುಗಳು ಮತ್ತು ಕೃಷಿ ಬಿಡಿಸಲಾಗದ ನಂಟನ್ನು ಹೊಂದಿದ್ದು, ಇವು ಬಹುತೇಕ ಎಲ್ಲರ ಆಹಾರ ಮತ್ತು ಆರ್ಥಿಕ ಭದ್ರತೆಯ ಮೂಲಗಳಾಗಿವೆ. ರೈತರು ಜಾನುವಾರುಗಳನ್ನು ಹಾಲು, ಗೊಬ್ಬರ, ವಸ್ತುಗಳ ಸಾಗಣೆ ಮತ್ತು ಬರದ ಪರಿಸ್ಥಿತಿಯಲ್ಲಿ ನೆರವಾಗುವ ನಿಟ್ಟಿನಲ್ಲಿ ಸಾಕುತ್ತಾರೆ. ಸಾಕಷ್ಟು ವರ್ಷಗಳ ನಂತರ ಇವುಗಳು ಕಾರ್ಯಕ್ಷಮತೆ ಕುಂದಿ, ಅನುತ್ಪಾದಕವಾದಾಗ ಅವುಗಳನ್ನು ಮಾರುತ್ತಾರೆ. ಇಂತಹ ಅನುತ್ಪಾದಕ ಜಾನುವಾರುಗಳಿಂದಲೇ ದೊಡ್ಡ ದೊಡ್ಡ ಮಾಂಸ ಮಾರಾಟ ಉದ್ಯಮ, ಮೂಳೆಗಳ, ರಕ್ತದ ಹಾಗೂ ಚರ್ಮದ ಉದ್ಯಮಗಳು ಇಂದು ನಡೆಯುತ್ತಿವೆ.
ಜಾನುವಾರುಗಳ ಉದ್ಯಮದಲ್ಲಿ ಅತಿ ಕೆಳಸ್ಥರದ ಕೆಲಸಗಾರರಾಗಿ ದುಡಿಯುತ್ತಿರುವುದು ದಲಿತ ಸಮುದಾಯದ ವ್ಯಕ್ತಿಗಳೇ ಆಗಿದ್ದಾರೆ. ಈ ಉದ್ಯಮದಲ್ಲಿ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದ ದಲಿತರಿಗೆ ಜಾನುವಾರು ಹತ್ಯೆ ನಿಷೇಧ ಎಂಬ ಕಾಯ್ದೆ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ದಲಿತ ಸಮುದಾಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಅವಶ್ಯಕವಾದಂತಹ ಮೂಲಸೌಕರ್ಯಗಳನ್ನು ಹಾಗೂ ತಂತ್ರಜ್ಞಾನ ಅಭಿವೃದ್ಧಿಗಾಗಿ ಹೂಡಿಕೆ ಮಾಡುವುದರ ಬದಲಿಗೆ, ಇರುವ ಜೀವನೋಪಾಯದ ಕೆಲಸಗಳನ್ನೂ ಸಹ ಕಿತ್ತುಕೊಳ್ಳುತ್ತಿರುವುದು ಒಂದ ಬಗೆಯ ಜಾತಿ ತಾರತಮ್ಯವೇ ಆಗಿದೆ.
ಕರ್ನಾಟಕದಲ್ಲಿ ಆಹಾರ ಫ್ಯಾಸಿಸಂ
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಘಟನೆಗಳು ದೌರ್ಜನ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದ ಬಿಜೆಪಿ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಕೋಮು ಧೃವೀಕರಣದ ನಡುವೆ, ಬಲಪಂಥೀಯ ಸಂಘಟನೆಗಳು ಮುಸ್ಲಿಂ ಸಮುದಾಯದ ಮೇಲೆ ಹಲವು ರೀತಿಯ ಬ್ಯಾನ್ ಅಥವಾ ನಿಷೇಧಗಳನ್ನು ಹೇರಲು ಕರೆ ನೀಡುತ್ತಿರುವ ಸಂದರ್ಭದಲ್ಲಿಯೇ ಇದೂ ಸಹ ಮುನ್ನೆಲೆಗೆ ಬಂದಿದೆ.
ಅದಾಗಲೇ ದಿನೇ ದಿನೇ ಹೆಚ್ಚುತ್ತಿದ್ದ ಕೋಮುದ್ವೇಷಕ್ಕೆ ತುಪ್ಪ ಸುರಿದಂತೆ, ಬಲಪಂಥೀಯ ಸಂಘಟನೆಗಳು ಕರ್ನಾಟಕದಲ್ಲಿ ಮಾರ್ಚ್ 2022 ರಿಂದ ಹಲಾಲ್ ಮಾಂಸವನ್ನು ಖರೀದಿಸುವುದರ ವಿರುದ್ಧ ಚಳುವಳಿಗಳನ್ನು ನಡೆಸುತ್ತಿವೆ. ಇದೇ ಗುಂಪುಗಳು ಈ ತಿಂಗಳ ಆರಂಭದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳನ್ನು ಭೇಟಿಮಾಡಿ, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಹಿಂದೂ ದೇವಸ್ಥಾನಗಳ ಹತ್ತಿರ ಅಥವಾ ಜಾತ್ರೆಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರವನ್ನು ಮಾಡುವ ಅವಕಾಶವನ್ನು ನೀಡಬಾರದು ಎಂದು ಮನವಿಯನ್ನು ಸಲ್ಲಿಸಿದವು. ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಬೆಂಗಳೂರಿನ ಜನತೆಯೂ ಸಹ ಹಿಂದೂ ಸಂಘಟನೆಗಳು ಮುಸ್ಲಿಂರ ಮೇಲೆ ಹೇರುತ್ತಿರುವ ನಿಷೇಧಗಳ ಕಾರಣ ನಡೆದ ಕೋಮು ಸಾಮರಸ್ಯವನ್ನು ಕೆದಡುವ ಘಟನೆಗಳಿಗೆ ಸಾಕ್ಷಿಯಾಗಿದ್ದಾರೆ. ಕರ್ನಾಟಕ ಜಾನುವಾರುಗಳ ಹತ್ಯೆ ಹಾಗೂ ಜಾನುವಾರುಗಳ ರಕ್ಷಣೆ ಕಾಯಿದೆ, 2020 ರೈತರನ್ನು, ಜಾನುವಾರು ವ್ಯಾಪಾರಿಗಳನ್ನು, ಕಸಾಯಿಗಳನ್ನು ಹಾಗೂ ಚರ್ಮದ ಉದ್ಯಮದ ಕೆಲಸಗಾರರನ್ನು ಆರ್ಥಿಕ ಬಡತನಕ್ಕೆ ತಳ್ಳಿದೆ. ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಿರುವ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯಲ್ಲಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಹೇಗೆ ಕರ್ನಾಟಕ ಜಾನುವಾರುಗಳ ಹತ್ಯೆ ಹಾಗೂ ಜಾನುವಾರುಗಳ ರಕ್ಷಣೆ ಕಾಯಿದೆ, 2020 ಕಾರ್ಯಪಾಲಕ ಕಾಯಿದೆಯು ಭಾರತದ ನಾಗರೀಕರ ಮೂಲಭೂತ ಹಕ್ಕುಗಳನ್ನು, ವಿಶೇಷವಾಗಿ ಸಂವಿಧಾನದ 14, 19 ಹಾಗೂ 21 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ. ಇತ್ತೀಚೆಗೆ “ಆಹಾರ ನಮ್ಮ ಹಕ್ಕು” ಬಳಗವು ಸಿದ್ಧಪಡಿಸಿದ ವರದಿಯಲ್ಲಿ ಈ ಕಾಯಿದೆಯ ವ್ಯತಿರಿಕ್ತ ಪರಿಣಾಮಗಳನ್ನು ಸಮಗ್ರವಾಗಿ ದಾಖಲಿಸಲಾಗಿದೆ. ಬಹುಪಾಲು ಜಾನುವಾರಗಳನ್ನು ಜಮೀನು ಇಲ್ಲದ, ಅಂಚಿಗೆ ಸರಿಸಲ್ಪಟ್ಟ, ಸಣ್ಣ ಪ್ರಮಾಣದ ರೈತರು ಹೊಂದಿದ್ದು, ಇವುಗಳ ಮೇಲೆ ಅವರು ಬಹುತೇಕ ಅವಲಂಬಿತರಾಗಿರುತ್ತಾರೆ. ಹಾಲು ಉತ್ಪಾದನೆಯಲ್ಲಿನ ಕುಸಿತವು ರೈತನ ಆದಾಯಕ್ಕೆ ಆಗುವ ನಷ್ಟ ಮಾತ್ರವಲ್ಲದೆ, ದೇಶದ ಪೌಷ್ಟಿಕಾಂಶ ಭದ್ರತೆಗೂ ಸಹ ಆಗುವ ನಷ್ಟವಾಗಿದೆ.
ಮೊಟ್ಟೆಗಾಗಿ ಯುದ್ಧ
ಭೀಫ್ ಹಾಗೂ ಮಾಂಸದ ಸುತ್ತಲೂ ಸಹ ನಡೆಯುತ್ತಿರುವ ರಾಜಕೀಯದ ಬಗ್ಗೆ ನಮಗೆ ತಿಳಿದೇ ಇದೆ. ಆದರೆ, ಬಿಜೆಪಿ ಆಡಳಿತದ ಒಟ್ಟು 19 ರಾಜ್ಯಗಳ ಪೈಕಿ, 14 ರಾಜ್ಯಗಳನ್ನೂ ಸೇರಿದಂತೆ ಇತರೆ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ನೀಡುವುದನ್ನು ಕೈಬಿಡಲಾಗಿದೆ. ಬಹುತೇಕ ಈ ರಾಜ್ಯಗಳಲ್ಲಿ (ಛತ್ತೀಸ್‌ಗಡ, ಕರ್ನಾಟಕ ಮತ್ತು ಮಧ್ಯ ಪ್ರದೇಶ) ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಮೊಟ್ಟೆಗಳನ್ನು ನೀಡುವುದನ್ನು ಮೇಲ್ವರ್ಗದ ಸವಲತ್ತುಗಳನ್ನು ಹೊಂದಿರುವ ಮೇಲ್ಜಾತಿಗಳವರು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಮಧ್ಯ ಪ್ರದೇಶದಲ್ಲಿ, ಆದಿವಾಸಿಗಳೇ ಬಹುಸಂಖ್ಯಾತರಾಗಿರುವ ಮೂರು ಜಿಲ್ಲೆಗಳಲ್ಲಿ ಇವರ ವಿರೋಧದಿಂದ ಆರಂಭಿಕವಾಗಿ ನೀಡಬೇಕೆಂದಿದ್ದ ಮೊಟ್ಟೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಇವರು ಬಿಡುವುದಿಲ್ಲ.
ಇತ್ತೀಚೆಗೆ ಕರ್ನಾಟಕ ಸರ್ಕಾರವು ಈ ಆಚರಣೆಯನ್ನು ಮುರಿದು, ನವೆಂಬರ್ 2021 ರಲ್ಲಿ ಪೋಷಕರ, ಪೌಷ್ಟಿಕಾಂಶ ತಜ್ಞರ, ವೈದ್ಯರ, ಮಕ್ಕಳ ಮತ್ತು ಸಾಮಾಜಿಕ ಕಾರ್ಯಕರ್ತರ ಬಹುಕಾಲದ ಬೇಡಿಕೆಯಾದ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ನೀಡುವ ಸ್ವಾಗತಾರ್ಹ ನಿರ್ಧಾರವನ್ನು ಕೈಗೊಂಡಿತು. ಆದರೆ ಇದು 7 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು.
2015 ರಲ್ಲಿ ಇದೇ ರೀತಿಯ ಪ್ರಯತ್ನವನ್ನು ವಿರೋಧಿಸಿದ್ದ ಧಾರ್ಮಿಕ ಗುಂಪುಗಳಿಂದಲೇ ಮತ್ತೆ ವಿರೋಧಗಳು ಕೇಳಿಬಂದವು. ಸಾಂಪ್ರಾದಾಯಿಕ ಆಹಾರ ಆಚರಣೆಗಳನ್ನು ಮುರಿದು, ಸಸ್ಯಹಾರಿ ಮಕ್ಕಳ ಮೇಲೆ, ಮೊಟ್ಟೆಯ ಬದಲಿಗೆ ಬೇರೆ ಆಯ್ಕೆಗಳಿದ್ದರೂ ಸಹ, ಮೊಟ್ಟೆಯನ್ನು ಹೇರುವುದು ತಾರತಮ್ಯ ಎಂಬ ಅವರ ಹಲವು ರೀತಿಯಲ್ಲಿ ಹಾಸ್ಯಾಸ್ಪದವಾಗಿದೆ.
ಮೊಟ್ಟೆಗಳ ಸೇವನೆ ಮಕ್ಕಳಲ್ಲಿ ಪೌಷ್ಟಿಕಾಂಶಗಳನ್ನು ಹೆಚ್ಚಿಸುತ್ತದೆ ಮಾತ್ರವಲ್ಲದೆ, ಮಕ್ಕಳು ಯಾವುದೇ ರೀತಿಯ ಸೋಂಕಿನ ವಿರುದ್ಧ ಹೋರಾಡಲು ಹೆಚ್ಚು ಪೌಷ್ಟಿಕಾಂಶವನ್ನು ಹೊಂದುತ್ತಾರೆ. ಇದಕ್ಕಾಗಿಯೇ, ಸಾಂಪ್ರದಾಯಿಕವಾಗಿ ಮೊಟ್ಟೆಯನ್ನು ತಿನ್ನುವ ಎಲ್ಲಾ ಮಕ್ಕಳಿಗೂ, ಅವರು ಪೌಷ್ಟಿಕಾಂಶವನ್ನು ಹೊಂದಿರಲಿ ಅಥವಾ ಅವರಲ್ಲಿ ಪೌಷ್ಟಿಕಾಂಶ ಕಡಿಮೆ ಇರಲಿ, ಎಲ್ಲರಿಗೂ ಸಹ ಮೊಟ್ಟೆಯನ್ನು ನೀಡಲೇ ಬೇಕು ಏಕೆಂದರೆ ಮಕ್ಕಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಳಗಳ ಹಿನ್ನೆಲೆಯಲ್ಲಿ ಅವರು ಅಪೌಷ್ಟಿಕತೆಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ, ಅಪೌಷ್ಟಿಕತೆಯನ್ನೂ ಹಾಗೂ ಅದರಿಂದಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದು ಕೇವಲ ಪೌಷ್ಟಿಕಾಂಶ ಸೂಚಕಗಳನ್ನು ನೋಡಿ, ಕ್ರಮಕೈಗೊಳ್ಳುವುದಕ್ಕಿಂತ ಉತ್ತಮ ಆರೋಗ್ಯ ಆಚರಣೆಯಾಗಿದೆ. ಮೊಟ್ಟೆಗಳು ಮಕ್ಕಳಿಗೆ ಅಗತ್ಯವಾದ ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಅಂದರೆ ಒಳ್ಳೆಯ ಗುಣಮಟ್ಟದ ಪ್ರೋಟೀನುಗಳು, ಮಿನರಲ್‌ಗಳು, ಪೋಷಕಾಂಶಗಳು ಮತ್ತು ಕೊಬ್ಬಿನಾಂಶವನ್ನು ಹೊಂದಿವೆ. ಕಡಿಮೆ ಬೆಲೆ, ತಯಾರಿಸಲು ಸುಲಭ ಹಾಗೂ ಇತರೆ ಪೌಷ್ಟಿಕಾಂಶ ಆಹಾರಗಳಿಗೆ ಹೋಲಿಸಿದರೆ ಇವುಗಳನ್ನು ಕಲಬೆರಕೆ ಮಾಡಲು ಕಷ್ಟಕರವಾಗಿದೆ. ಮೊಟ್ಟೆಗಳನ್ನು ನೀಡುವುದರಿಂದ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ಸಹ ಹೆಚ್ಚುತ್ತದೆ. ಅನೇಕ ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆಯನ್ನು ನೀಡದಿರುವುದು ಮಕ್ಕಳಿಗೆ ಮಾಡಿರುವ ಅನ್ಯಾಯವಾಗಿದೆ. ಇದು ಜಾತಿ ತಾರತಮ್ಯವನ್ನು ಎತ್ತಿ ತೋರಿಸುತ್ತದೆ.
ಭಾರತದಲ್ಲಿ ಹರಡಲಾಗುತ್ತಿರುವ ಆಹಾರ ಅಸಹಿಷ್ಣುತೆಯ ಖಂಡನೆ
ದುರಾದೃಷ್ಟವೆಂಬಂತೆ, ಭಾರತದ ಪೌಷ್ಟಿಕಾಂಶ ನೀತಿಗಳು ವೈಜ್ಞಾನಿಕತೆಯನ್ನು ಹೊರತು ಪಡಿಸಿ ಮಿಕ್ಕೆಲ್ಲ ಮಜಲುಗಳಲ್ಲಿ ಥಳಕು ಹಾಕಿಕೊಂಡಿವೆ. ಇದರಿಂದಾಗಿ, ಆಸಕ್ತಿ ಇರುವ ಯಾರಾದರೂ ಸಹ ಪೌಷ್ಟಿಕಾಂಶ ಕುರಿತ ಭಾರತದ ಅಂಕಿಅಂಶಗಳ ಕಡೆ ಕಣ್ಣಾಯಿಸಿದರೆ ಅಲ್ಲಿ ಪ್ರಸ್ತುತವಿರುವ ಭೀಕರ ದುಷ್ಪರಿಣಾಮಗಳನ್ನು ಕಾಣಬಹುದು.
ಅನೇಕ ವರ್ಷಗಳವರೆಗೂ ಈ ದೇಶದ “ಸಸ್ಯಹಾರಿ”ಯ ದುರ್ಬಲ ಸೂಕ್ಷö್ಮತೆ ಹಲವು ನೀತಿ ನಿರ್ಧಾರಗಳನ್ನು ನಿರ್ಧರಿಸುತ್ತಿತ್ತು. ಸಾಂಸ್ಥಿಕ ಹಾಸ್ಟೆಲ್ಲುಗಳು, ಸರ್ಕಾರಿ ಕಚೇರಿಗಳು, ಮಾಧ್ಯಮ ಮನೆಗಳು, ವಿಮಾನಗಳು, ರೈಲುಗಳು ಇತ್ಯಾದಿ ಸಾರ್ವಜನಿಕ ಸ್ಥಳಗಳು ಈ “ಸಸ್ಯಹಾರಿಗಳ” ಪ್ರಭಾವದಿಂದ ಎಷ್ಟು ಸೂಕ್ಶ್ಮವಾಗಿದ್ದವೆಂದರೆ ಒಂದು ಮೊಟ್ಟೆಯ ಚೂರು ಸಹ ದೊಡ್ಡ ಕೋಲಾಹಲವನ್ನೆಬ್ಬಿಸುತ್ತಿತ್ತು. ಇದರ ಪರಿಣಾಮವೆಂಬಂತೆ ಬಹುಸಂಖ್ಯಾತರ ಆಹಾರ ವೈವಿಧ್ಯತೆಯು ಕಳೆದುಹೋದದ್ದು ಮಾತ್ರವಲ್ಲದೆ, ಇದೇ ಬಹುಸಂಖ್ಯಾತರ ಶ್ರೀಮಂತ ಆಹಾರ ಸಂಸ್ಕೃತಿಯನ್ನು ಅಪರಾಧೀಕರಣಗೊಳಿಸಲಾಯಿತು. ಅನೀಮಿಯ ಅಥವಾ ಬೆಳವಣಿಗೆ ಕುಂಠಿತವನ್ನು ತಡೆಯಲು ಪೌಷ್ಟಿಕಾಂಶ ಆಹಾರಗಳಾದ ಮೀನು, ಮೊಟ್ಟೆ, ಮಾಂಸವನ್ನು ಪ್ರತ್ಯೇಕಿಸುವುದು ಅಥವಾ ಪೋಷಕಾಂಶ ಎ, ಬಿ12, ಜಿಂಕ್, ಕ್ಯಾಲ್ಷಿಯಂ, ಪೋಷಕಾಂಶ ಡಿ, ಕೊಬ್ಬಿನಾಂಶ ಇತ್ಯಾದಿಗಳ ಗೈರು ದೇಶವನ್ನು ದೊಡ್ಡ ಆರೋಗ್ಯ ಸಮಸ್ಯೆಯಡೆಗೆ ಹಾಗೂ ಪೌಷ್ಟಿಕಾಂಶ ಭಿಕ್ಕಟ್ಟಿಗೆ ತಳ್ಳುತ್ತಿದೆ.
ಶೇಕ್ ಝಾಹಿದ್ ಮುಕ್ತಾರ್ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟç & ಅದರ್ಸ್ 2016 ಪ್ರಕರಣದಲ್ಲಿ ಬಾಂಬೆ ಹೈಕೋರ್ಟು ಸ್ಪಷ್ಟವಾಗಿ ಈ ರೀತಿ ಹೇಳಿದೆ: “ಸರ್ಕಾರವು ತನ್ನ ನಾಗರೀಕರಿಗೆ ನಿರ್ದಿಷ್ಟ ವಿಧದ ಆಹಾರವನ್ನು ಸೇವಿಸಲು ಹೇಳಿದರೆ, ಅಥವಾ ನಾಗರೀಕರು ಒಂದು ವಿಧದ ಆಹಾರವನ್ನು ಸೇವಿಸಲು ಅಥವಾ ತಮ್ಮಲ್ಲಿ ಇಟ್ಟುಕೊಳ್ಳಲು ತಡೆದರೆ, ಆಗ ಅದು ತಮ್ಮ ಪಾಡಿಗೆ ಇರುವ ಹಕ್ಕಿನ ಜೊತೆಗೆ ಖಾಸಗೀತನದ ಹಕ್ಕಿನ ಉಲ್ಲಂಘನೆಯಾಗುತ್ತದೆ.”
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಮಾಡುತ್ತಿರುವ ಭೀಫ್ ರಾಜಕೀಯವನ್ನು ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಹಾಗೂ ರಾಜಕೀಯವಾಗಿ ಗುರಿಮಾಡುತ್ತಿರುವ ಹಿನ್ನೆಲೆಯಿಂದ ನೋಡಬೇಕು. ಕೋವಿಡ್ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಮಾಡಲಾದ ಅವೈಜ್ಞಾನಿಕ ಲಾಕ್‌ಡೌನ್‌ಗಳು ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಹಾಗೂ ಆದಾಯ ನಷ್ಟಕ್ಕೆ ಕಾರಣವಾಯಿತು; ಮತ್ತಷ್ಟು ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸಣ್ಣ ಹಾಗೂ ದೊಡ್ಡ ಪ್ರಮಾಣದ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರವನ್ನು ಗುರಿಯಾಗಿಸಲಾಯಿತು. ಜಾನುವಾರು ಹತ್ಯೆ ಕಾಯಿದೆಯು, ಅನೇಕರು ಅಭಿಪ್ರಾಯ ಪಡುವಂತೆ, ಅದನ್ನು ಮುಸ್ಲಿಂ ಸಮುದಾಯದವರನ್ನು ಆರ್ಥಿಕವಾಗಿ ಬಡವರನ್ನಾಗಿ ಮಾಡಲು ಜಾರಿಗೆ ತರಲಾಯಿತು.
ಬಹಳ ಕಾಲದಿಂದ ಭಾರತವು ಪ್ರಾಣಿ ಮೂಲ ಆಹಾರ (ಎಎಸ್‌ಎಫ್) ದೊಂದಿಗೆ ಕಷ್ಟಸಾಧ್ಯ ಸಂಬಂಧವನ್ನು ಹೊಂದಿದೆ. ಈ ದೇಶದಲ್ಲಿನ ಮನುಷ್ಯರು ತಮ್ಮ ತಮ್ಮಲ್ಲಿ ಜಾತಿ ಪದ್ಧತಿಯನ್ನು ನಿರ್ಮಿಸಿಕೊಂಡಿರುವಂತೆ, ಈ ಪ್ರಾಣಿ ಮೂಲ ಆಹಾರಗಳನ್ನು ಸಹ ಆಂತರಿಕವಾಗಿ ಅಥವಾ ಬಹಿರಂಗವಾಗಿ ಶ್ರೇಣೀಕರಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಹಾಲು ಅಥವಾ ಡೈರಿ ಉತ್ಪನ್ನಗಳಿಗೆ ಉನ್ನತ ಗೌರವವನ್ನು ನೀಡಿ, ಮತ್ತೊಂದು ಬದಿಯಲ್ಲಿ ಕೆಂಪು ಮಾಂಸಕ್ಕೆ, ವಿಶೇಷವಾಗಿ ಭೀಫ್ ಅನ್ನು ಅಪರಾಧಿಕ ದೃಷ್ಟಿಯಿಂದ ನೋಡಲಾಗುತ್ತಿದೆ. ಇನ್ನೂ ಭೀಫ್ ಅನ್ನು ಇಟ್ಟುಕೊಂಡವರನ್ನು ಥಳಿಸಿ, ಹಿಂಸಿಸಲಾಗುತ್ತಿದೆ. ಇನ್ನುಳಿದ ಮಾಂಸಗಳಾದ ಕೋಳಿ, ಮೀನು ಹಾಗೂ ಇತ್ಯಾದಿಗಳು ಮತ್ತೊಂದು ಗುಂಪಿಗೆ ಸೇರುತ್ತವೆ.
ಮೇಲ್ನೋಡಕ್ಕೆ ಇವುಗಳಿಗೆ ಸಂಬಂಧವಿಲ್ಲವೆಂದು ಗೋಚರಿಸಿದರೂ ಸಹ, ದೊಡ್ಡ ಪ್ರಮಾಣದಲ್ಲಿ ಹಾಲು ಹಾಗೂ ಡೈರಿ ಉತ್ಪನ್ನಗಳನ್ನು ಹೊರತುಪಡಿಸಿ, ಪ್ರಾಣಿ ಮೂಲ ಆಹಾರಗಳನ್ನು ಗುರಿಯಾಗಿಸುತ್ತಿರುವ ಹಾಗೂ ಇವುಗಳನ್ನು ವ್ಯಾಪಾರ ಮಾಡುತ್ತಿರುವವರಿಗೆ ಜೀವನೋಪಾಯವನ್ನು ನಿರಾಕರಿಸುತ್ತಿರುವುದಕ್ಕೆ ನಾವು ಸಂಬಂಧಗಳನ್ನು ಕಲ್ಪಿಸಲೇಬೇಕಾಗುತ್ತದೆ.
ಸಸ್ಯಾಹಾರಿಗಳು ತಮ್ಮ ಆಯ್ಕೆಯ ಆಹಾರವನ್ನು ಗೌರವಿಸಬೇಕೆಂದು ಬೇಡಿಕೆ ಇಡುತ್ತಾರೆ. ಅದಾಗ್ಯೂ ನಾವು ಅರ್ಥಮಾಡಿಕೊಳ್ಳಬೇಕಿರುವುದೇನೆಂದರೆ ಶ್ರೀಮಂತ ಸಸ್ಯಹಾರಿಗಳ ವೈವಿಧ್ಯಮಯ ಹಾಲು, ತುಪ್ಪ, ಬೆಣ್ಣೆ, ಕಾಳುಗಳು, ಬೀಜಗಳು, ತರಕಾರಿಗಳು ಇತ್ಯಾದಿಗಳು ಬಡವರ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಹೇರಲಾಗಿರುವ ರಾಗಿ ಹಾಗೂ ಇತರೆ ಕಾಳುಗಳ ಸಸ್ಯಹಾರಿತನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೇವಲ 20% ಇರುವ ಸಸ್ಯಾಹಾರಿಗಳ ಸೂಕ್ಷ್ಮತೆಗಳು ಮಿಕ್ಕ ಬಹುಸಂಖ್ಯಾತರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ರಹದಾರಿಯಾಗಬಾರದು; ಅದೇ ರೀತಿ ವಿಜ್ಞಾನ ಹಾಗೂ ವೈಜ್ಞಾನಿಕ ಪುರಾವೆಗಳು ಸುಳ್ಳುಗಳು, ಸಿದ್ಧಾಂತಗಳು ಹಾಗೂ ವಿವೇಚನಾರಹಿತ ಶಕ್ತಿಗಳಿಗೆ ಹೆದರಿ, ಮೂಲೆಗುಂಪಾಗಬಾರದು.
ಈ ಟಿಪ್ಪಣಿಯನ್ನು ಡಾ. ಸಿಲ್ವಿಯಾ ಕರ್ಪಗಂ ಮತ್ತು ಜಿಯಾನ್ ಡ್ರೇಜ್ ಅವರಿ ಸಿದ್ಧಪಡಿಸಿದ್ದಾರೆ.
(ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ: ಅಜಯ್ ಕುಮಾರ್)
[…] Published on Ahara Namma hakku and Roundtable India-For an informed Ambedkar age […]
LikeLike
[…] This is the Kannada translation of the letter […]
LikeLike