ದಿನಾಂಕ:02-08-2022
ರವರಿಗೆ,
ಮುಖ್ಯ ಕಾರ್ಯದರ್ಶಿಗಳು,
ಕರ್ನಾಟಕ ಸರ್ಕಾರ, ಬೆಂಗಳೂರು
ವಿಷಯ: ಕರ್ನಾಟಕದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಊಟದ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿ ಮನವಿ.
ಮಾನ್ಯರೇ,
ನಾವು ಪೌಷ್ಟಿಕಾಂಶ ತಜ್ಞರು, ಸಾಮಾಜಿಕ ಹೋರಾಟಗಾರರು, ಸಂಶೋಧಕರು, ಹಾಗೂ ವೈದ್ಯರನ್ನೊಳಗೊಂಡ ಒಂದು ಗುಂಪಾಗಿದ್ದು, ಕರ್ನಾಟಕದ ಕಾಳಜಿಯುಳ್ಳ ನಾಗರೀಕರಾಗಿದ್ದೇವೆ. ಕಳೆದ ಹಲವು ವರ್ಷಗಳಿಂದ ಮಕ್ಕಳ ಆಹಾರದ ಕುರಿತೂ ಸಹ ಕಾಳಜಿ ಹೊಂದಿದವರಾಗಿದ್ದೇವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ೨೦೧೩ ಹಾಗೂ ಆಹಾರದ ಹಕ್ಕಿನ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟು ನೀಡಿರುವ ವಿವಿಧ ನಿರ್ದೇಶನಗಳಿಗನುಸಾರ (ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್ ವರ್ಸಸ್ ಭಾರತ ಒಕ್ಕೂಟ ರಿಟ್ ಅರ್ಜಿ ೧೯೬/೨೦೦೧) ಕರ್ನಾಟಕದಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ನೀಡುತ್ತಿರುವ ಆಹಾರದಲ್ಲಿ ಪೌಷ್ಟಿಕಾಂಶಗಳು ಕೂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇವೆ.
೧. ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ನೀಡುವುದು.
ಕರ್ನಾಟಕದಲ್ಲಿ ಮಧ್ಯಾಹ್ನದ ಬಿಸಿಯೂಟದ ಭಾಗವಾಗಿ ಮಕ್ಕಳಿಗೆ ಮೊಟ್ಟೆಯನ್ನು ನೀಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಕ್ರಮವಾಗಿದೆ. ಮಧ್ಯಾಹ್ನದ ಊಟದೊಂದಿಗೆ ಮೊಟ್ಟೆಯನ್ನು ಸೇರಿಸುವುದು ಶಾಲೆಗೆ ಹೋಗುವ ಮಕ್ಕಳು ಹಾಗೂ ಅವರ ಪೋಷಕರ ದೀರ್ಘಕಾಲದ ಬೇಡಿಕೆಯಾಗಿತ್ತು. ಊಟದೊಂದಿಗೆ ಮೊಟ್ಟೆಯನ್ನು ಸೇವಿಸುವುದು ಈಗಾಗಲೇ ಬಹುತೇಕ ಬೆಳೆಗಳಿಂದ ಕೂಡಿದ ಆಹಾರಕ್ಕೆ ಅಧಿಕ ಪೌಷ್ಟಿಕಾಂಶಗಳನ್ನು ಸೇರಿಸುತ್ತದೆ. ವರ್ಷಕ್ಕೆ ೪೫ ಮೊಟ್ಟೆಗಳು ಎನ್ನುವ ನಿರ್ಧಾರ ಈಗಾಗಲೇ ಶಿಫಾರಸ್ಸು ಮಾಡಿದ ವಾರಕ್ಕೆ ೫ ಮೊಟ್ಟೆಗಳಿಗಿಂತ ಕಡಿಮೆಯಾಗಿದೆ. (ಅನುಬಂಧ ೧). ಇದರ ಹೊರತಾಗಿ ಎಂಬಂತೆ, ೯ ಹಾಗೂ ೧೦ ನೇ ತರಗತಿಗಳಲ್ಲಿ ಕಲಿಸುತ್ತಿರುವ ಮಕ್ಕಳನ್ನು ಮೊಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಒಳಗೊಂಡಿರುವುದಿಲ್ಲ.
ಕೇಂದ್ರಿಕೃತ ಅಡಿಗೆಮನೆಗಳನ್ನು ನಡೆಸುತಿರುವ ಹಲವು ಎನ್‌ಜಿಓಗಳು ಹಲವು ಧಾರ್ಮಿಕ ಕಾರಣಗಳನ್ನು ನೀಡಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುತ್ತಿವೆ ಎಂಬುದನ್ನು ತಿಳಿದು ನಾವು ಕಳವಳಗೊಂಡಿದ್ದೇವೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೧೭ ರಲ್ಲಿ ನೀಡಿರುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಸಿವಿಲ್ ಸೊಸೈಟಿ ಸಂಸ್ಥೆಗಳು (ಎನ್‌ಎಸ್‌ಓ) / ಸರ್ಕಾರೇತರ ಸಂಘ ಸಂಸ್ಥೆ (ಎನ್‌ಜಿಓ) ಗಳ ಕಾರ್ಯನಿರ್ವಹಿಸುವಿಕೆ ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ ವೈಯಕ್ತಿಕ ಧಾರ್ಮಿಕ ನಂಬಿಕೆಗಳನ್ನು ಪಸರಿಸುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ತಾವು ಗಮನಿಸಬೇಕು. (ಅನುಬಂಧ 2a).
“೨.೧೧ ಜಾತಿ, ಮತ, ಹಾಗೂ ಧರ್ಮದ ಆಧಾರದ ಮೇಲೆ ಸಿಎಸ್‌ಓ/ಎನ್‌ಜಿಓ ಗಳು ತಾರತಮ್ಯವನ್ನು ಎಸಗಬಾರದು ಹಾಗೂ ಯಾವುದೇ ಧಾರ್ಮಿಕ ನಂಬಿಕೆಯನ್ನು ಪಸರಿಸಲು ಈ ಕಾರ್ಯಕ್ರಮವನ್ನು ಬಳಸಿಕೊಳ್ಳಬಾರದು.”
ಈ ನಿಟ್ಟಿನಲ್ಲಿ ತಾವು ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿಮ್ಮನ್ನು ವಿನಂತಿಸಿಕೊಳ್ಳುತ್ತಿದ್ದೇವೆ.
- ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆಗಳನ್ನು ನೀಡುವುದನ್ನು ೯ ಹಾಗೂ ೧೦ ನೇ ತರಗತಿಗಳ ಮಕ್ಕಳಿಗೂ ಸಹ ವಿಸ್ತರಿಸಬೇಕು ಹಾಗೂ ವಾರದ ೫ ದಿನಗಳ ಕಾಲ ಮೊಟ್ಟೆಗಳನ್ನು ನೀಡಬೇಕು.
- ಈ ನಿಟ್ಟಿನಲ್ಲಿ ಯಾವುದೇ ಎನ್‌ಜಿಓ ಮಕ್ಕಳಿಗೆ ಮೊಟ್ಟೆ ವಿತರಿಸುವುದನ್ನು ವಿರೋಧಿಸಿದರೆ ಅಥವಾ ನಿರಾಕರಿಸಿದರೆ, ತಕ್ಷಣವೇ ಅವರ ಒಪ್ಪಂದವನ್ನು ರದ್ದುಪಡಿಸಬೇಕು. ಶಾಲೆಗಳಲ್ಲಿ ಅಡಿಗೆಮನೆಗಳನ್ನು ನಿರ್ಮಿಸಲು / ಕಿಚನ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದಲ್ಲಿ, ಸೂಚಿತ ನಿಯಮಗಳು ಹಾಗೂ ಗುಣಮಟ್ಟವನ್ನು ಪಾಲಿಸಿಕೊಂಡು ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸುವಂತೆ ಸ್ಥಳೀಯ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ತರಭೇತಿಯನ್ನು ನೀಡಬೇಕು.
೨. ಗ್ರಾಮಾಂತರ ಪ್ರದೇಶಗಳಲ್ಲಿ ಕೇಂದ್ರೀಕೃತ ಅಡಿಗೆಮನೆಗಳನ್ನು ಆರಂಭಿಸುವುದು ಕಾನೂನುಬಾಹಿರವಾಗಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಶಾಲಾಧಾರಿತ ಅಡಿಗೆಮನೆಗಳನ್ನು ಕೇಂದ್ರೀಕೃತ ಅಡಿಗೆಮನೆಗಳಿಗೆ ಹಸ್ತಾಂತರಿಸುವ ಯೋಜನೆಗಳಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮದ್ಯಾಹ್ನದ ಬಿಸಿಯೂಟವನ್ನು ನೀಡಬೇಕು ಎಂದು ಹೇಳುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಸೆಕ್ಷನ್ ೫ (೨೦೧೩ ರ ಸಂಖ್ಯೆ ೨೦) (ಎನ್‌ಎಫ್‌ಎಸ್‌ಎ ೨೦೧೩) ಕೇಂದ್ರೀಕೃತ ಅಡಿಗೆಮನೆಗಳು ನಗರ ಪ್ರದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಿಸಬೇಕು ಎಂಬುದನ್ನು ಸ್ಪಷ್ಟಪಡಿಸಿದೆ.
೫. (೧) ಅನುಚ್ಛೇಧ (ಬಿ) ಅಲ್ಲಿ ಒಳಗೊಂಡಿರುವ ನಿಬಂಧನೆಗಳಿಗೆ ಅನುಸಾರವಾಗಿ, ೧೪ ವರ್ಷದ ವಯೋಮಾನದವರೆಗಿನ ಮಕ್ಕಳು ಈ ಕೆಳಗಿನ ಪೌಷ್ಟಿಕಾಂಶಗಳನ್ನು ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ, ಅವುಗಳನ್ನು ಹೆಸರಿಸುವುದಾದರೆ-
(ಬಿ) ಅನುಸೂಚಿ ೨ ರಲ್ಲಿ ನೀಡಿರುವ ಪೌಷ್ಟಿಕಾಂಶ ಗುಣಮಟ್ಟವನ್ನು ಪೂರೈಸಲು, ಮಕ್ಕಳ ಪ್ರಕರಣದಲ್ಲಿ, ಅಂದರೆ ೬ನೇ ತರಗತಿಯವರೆಗಿನ ಅಥವಾ ೬ ರಿಂದ ೧೪ ವರ್ಷದವರೆಗಿನ ಮಕ್ಕಳಿಗೆ, ಉಚಿತವಾಗಿ, ಪ್ರತಿದಿನ, ಶಾಲಾ ರಜೆಯ ದಿನಗಳನ್ನು ಹೊರತುಪಡಿಸಿ, ಸ್ಥಳೀಯ ಸಂಸ್ಥೆಗಳು ನಡೆಸುವ ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕು.
೨) ಉಪ-ಸೆಕ್ಷನ್ (೧) ರಲ್ಲಿನ ಅನುಚ್ಛೇಧ (ಬಿ) ಯಲ್ಲಿ ಉಲ್ಲೇಖಿಸಲಾಗಿರುವ ಪ್ರತಿ ಶಾಲೆ ಮತ್ತು ಅಂಗನವಾಡಿಯು ಆಹಾರವನ್ನು ತಯಾರಿಸುವ, ಕುಡಿಯುವ ನೀರಿನ ಹಾಗೂ ನೈರ್ಮಲ್ಯದ ಸೌಲಭ್ಯಗಳನ್ನು ಹೊಂದಿರಬೇಕು.
ಕೇಂದ್ರ ಸರ್ಕಾರವು ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಅಗತ್ಯಕ್ಕೆ ತಕ್ಕಂತೆ, ನಗರ ಪ್ರದೇಶಗಳಲ್ಲಿ ಆಹಾರವನ್ನು ತಯಾರಿಸಲು ಕೇಂದ್ರೀಕೃತ ಅಡಿಗೆಮನೆಗಳ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ೨೦೧೩ ರ ಮಾನದಂಡಗಳ ಪ್ರಕಾರ. ಗ್ರಾಮಾಂತರ ಪ್ರದೇಶಗಳಲ್ಲಿನ ಯಾವುದೇ ಶಾಲೆಯನ್ನೂ ಸಹ ಕೇಂದ್ರೀಕೃತ ಅಡಿಗೆಮನೆ ವ್ಯವಸ್ಥೆಗೆ ನೀಡಬಾರದೆಂದೂ ಹಾಗೂ ಒಂದು ವೇಳೆ ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳನ್ನು ಈ ವ್ಯವಸ್ಥೆಗೆ ನೀಡಲಾಗಿದ್ದರೆ, ಅದನ್ನು ಕೂಡಲೆ ಹಿಂಪಡೆದು, ಅಲ್ಲಿ ಶಾಲಾಧಾರಿತ ಅಡಿಗೆಮನೆ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕೆಂದು ನಿಮ್ಮನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ.
೩. ನಗರ ಪ್ರದೇಶಗಳಲ್ಲಿನ ಶಾಲಾಧಾರಿತ ಅಡಿಗೆಮನೆಗಳನ್ನು ದೊಡ್ಡ ಮಟ್ಟದಲ್ಲಿ ಹಸ್ತಾಂತರಿಸುತ್ತಿರುವುದು ಮಕ್ಕಳ ಪೌಷ್ಟಿಕಾಂಶ ಅರ್ಹತೆಗಳನ್ನು ದುರ್ಬಲಗೊಳಿಸುತ್ತಿದೆ.
ನಗರ ಪ್ರದೇಶಗಳಲ್ಲಿಯೂ ಸಹ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ೨೦೧೩ ರ ಸೆಕ್ಷನ್ (೫) ಶಾಲಾಧಾರಿತ ಅಡಿಗೆಮನೆಗಳನ್ನೇ ಬಳಸಬೇಕೆಂದು ಹೇಳುತ್ತದೆ. ಒಂದು ವೇಳೆ ಶಾಲಾಧಾರಿತ ಅಡಿಗೆಮನೆಗಳನ್ನು ನಿರ್ಮಿಸಲು ಸ್ಥಳಾವಕಾಶದ ಕೊರತೆ ಎದುರಾದಲ್ಲಿ ಮಾತ್ರ ಕೇಂದ್ರೀಕೃತ ಅಡಿಗೆಮನೆಗಳ ನೆರವನ್ನು ಪಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. (ಅನುಬಂಧ 2b: ಎನ್‌ಜಿಓಗಳ ಕಾರ್ಯನಿರತಪಡಿಸುವುದರ ಕುರಿತ ಮಾರ್ಗಸೂಚಿಗಳು). ಇಲ್ಲಿ ನೀಡಿರುವ ಆದೇಶವನ್ನು ಪಾಲಿಸುವುದರ ಬದಲು, ನಾವು ಒಂದೇ ಸಮನೆ, ಅತಾರ್ಕಿಕವಾಗಿ ಶಾಲಾಧಾರಿತ ಅಡಿಗೆಮನೆಗಳನ್ನು ಮುಚ್ಚಿ, ಅದರ ಬದಲಿಗೆ ಕೇಂದ್ರೀಕೃತ ಅಡಿಗೆಮನೆಗಳನ್ನು ಬಳಸುವುದನ್ನು ಆರಂಭಿಸಿದ್ದೇವೆ. ಬೆಂಗಳೂರು ನಗರ ಜಿಲ್ಲೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ, ಇಲ್ಲಿ ವಾರ್ಷಿಕ ಕಾರ್ಯ ಯೋಜನೆ ಹಾಗೂ ಬಜೆಟ್ ೨೦೧೯-೨೦೨೦ ರ ಪ್ರಕಾರ ಒಟ್ಟು ಇರುವ ೨೧೩೩ ಶಾಲೆಗಳ ಪೈಕಿ ೨೦೨೧ ಶಾಲೆಗಳಲ್ಲಿ (೯೫%) ಕೇಂದ್ರೀಕೃತ ಅಡಿಗೆಮನೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗೆ, ವಿನಾಯಿತಿ ನೀಡಲಾದ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು, ಪಾಲಿಸಬೇಕಾಗಿದ್ದ ಸಾಮಾನ್ಯ ನಿಯಮವನ್ನೇ ನಾವು ಮರೆತಿರುವಂತಿದೆ. ಈ ನೀತಿ ನಿರೂಪಣೆಗಳ ಫಲಿತಾಂಶವನ್ನು ಈ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಅನುಭವಿಸಬೇಕಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ೨೦೧೩ ರ ಅನುಸೂಚಿ ೨ ರಲ್ಲಿ ಸೂಚಿಸಲಾಗಿರುವ ಹಾಗೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೂಲಕ ಪೂರೈಸಬೇಕಾದ ಪೌಷ್ಟಿಕಾಂಶ ಅರ್ಹತೆಗಳನ್ನು ಇಲಾಖೆಯು ಕೇಂದ್ರೀಕೃತ ಅಡಿಗೆಮನೆಗಳ ಮೇಲೆ ಬಹುತೇಕವಾಗಿ ಅವಲಂಬಿಸಿರುವ ಕಾರಣ ನಿರಾಕರಿಸಲಾಗುತ್ತಿದೆ. ಇದನ್ನು ನಾವು ಸರ್ಕಾರಿ ಅಂಕಿಅಂಶಗಳು, ವರದಿಗಳು, ಜೂನ್ ೨೦೧೯ ರಲ್ಲಿ ಕರ್ನಾಟಕದಾದ್ಯಂತ ೫ ಜಿಲ್ಲೆಗಳಲ್ಲಿನ ಸುಮಾರು ೩೦ ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡುವ ಮೂಲಕ ನಾವು ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ಕೆಳಗಿನಂತೆ ವಿವರಿಸುತ್ತಿದ್ದೇವೆ. (ವಿಸ್ಕೃತ ವರದಿ ಅನುಬಂಧ ೩ ರಲ್ಲಿದೆ).
ಎ) ಸೇವನೆ ಹಾಗೂ ಆಹಾರ ಪೋಲಾಗುವುದು: ಸಾಮಾನ್ಯವಾಗಿ, ಕೇಂದ್ರೀಕೃತ ಅಡಿಗೆಮನೆಗಳ ಮೂಲಕ ಎನ್‌ಜಿಓಗಳು ಪೂರೈಸುವ ಆಹಾರದ ಸೇವನೆಯು ಶಾಲಾಧಾರಿತ ಅಡಿಗೆಮನೆಗಳಲ್ಲಿ ಸಿದ್ಧಪಡಿಸಿದ ಆಹಾರಕ್ಕಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಕೆಲವು ಶಾಲೆಗಳಲ್ಲಿ ಕೇಂದ್ರೀಕೃತ ಅಡಿಗೆಮನೆಗಳ ಮೂಲಕ ಎನ್‌ಜಿಓಗಳು ಪೂರೈಸಿದ ಆಹಾರದ ಸೇವನೆಯ ಪ್ರಮಾಣ ಶೇ. ೬೦ ರಿಂದ ಶೇ. ೮೦ ಪ್ರತಿಶತಕ್ಕಿಂತಲೂ ಕಡಿಮೆ ಇತ್ತು. ಈ ಆಹಾರವನ್ನು ಮಕ್ಕಳು ಕಡಿಮೆ ಪ್ರಮಾಣದಲ್ಲಿ ಸೇವಿಸಲು ಕಾರಣ ಇದಕ್ಕೆ ಬಳಕೆಯಾದ ಅಕ್ಕಿಯು ಕಳಪೆ ಗುಣಮಟ್ಟದ್ದಾಗಿರುವುದು, ರುಚಿ ಹಾಗೂ ತಾಜಾತನ ಇಲ್ಲದಿರುವುದು ಹಾಗೂ ಸಾಂಸ್ಕೃತಿಕ ಅಸಮಂಜಸತೆಯಿಂದ ಕೂಡಿರುವುದಾಗಿದೆ. ಶಾಲೆಗಳಿಗೆ ಪದೇ ಪದೇ ಹೋಗುವುದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಎನ್‌ಜಿಓಗಳು ಕ್ಷೀರಭಾಗ್ಯ ಯೋಜನೆಯಡಿ ಹಾಲನ್ನು ಹಾಗೂ ಅಕ್ಷರ ದಾಸೋಹದಡಿ ಮಧ್ಯಾಹ್ನದ ಬಿಸಿಯೂಟವನ್ನು ಸಮೀಕರಿಸುತ್ತಿದ್ದಾರೆ. ಇದು ಹಾಲು ಮತ್ತು ಊಟದ ಗುಣಮಟ್ಟವನ್ನು ಗುರುತರ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕುರಿತ ತಮ್ಮ ಪರ್ಫಾಮೆನ್ಸ್ ಆಡಿಟ್‌ನಲ್ಲಿ (೨೦೦೯-೧೦ ರಿಂದ ೨೦೧೩-೧೪) (ಅನುಬಂಧ ೪) ರಲ್ಲಿ ಶಾಲೆಗಳ ಒಳಗೊಳ್ಳುವಿಕೆಯಲ್ಲಿ ಅತಿದೊಡ್ಡ ಎನ್‌ಜಿಓ ಆದ ಇಸ್ಕಾನ್ (ಅಕ್ಷಯಪಾತ್ರ ಫೌಂಡೇಶನ್) ನ ಕುರಿತು ಈ ರೀತಿ ದಾಖಲಿಸುತ್ತಾರೆ:
“ಒಂದು ಊಟಕ್ಕೆ ನಿಗಧಿಪಡಿಸಿದ ಅಂದರೆ ೧೦೦/೧೫೦ ಗ್ರಾಂನಷ್ಟು ಬೇಳೆಗಳಿಗಿಂತ ಕಡಿಮೆ ಬೇಳೆಗಳನ್ನು ಇಸ್ಕಾನ್ ಉಪಯೋಗಿಸಿದೆ. ೨೦೦೯-೧೦ ರಿಂದ ೨೦೧೩-೧೪ ವರೆಗಿನ ಅವಧಿಯಲ್ಲಿ ಆಹಾರ ಧಾನ್ಯಗಳನ್ನು ಉಪಯೋಗಿಸುವುದರ ಪ್ರಮಾಣ ಸತತವಾಗಿ ಇಳಿಕಕೆಯಾಗುತ್ತಲೇ ಇತ್ತು ಹಾಗೂ ಇದು ೧೨.೭೦ ಮತ್ತು ೨೩.೭೯ ರೊಳಗೆ ಮಾತ್ರ ಇದ್ದು, ಸೂಚಿತ ಕ್ಯಾಲೋರಿಗಳನ್ನು ಒಳಗೊಳ್ಳಲು ವಿಫಲವಾಗಿತ್ತು.
ಸೂಚಿತ ಪ್ರಮಾಣದ ಆಹಾರ ಧಾನ್ಯಗಳನ್ನು ಒಳಗೊಂಡಿರುವ ಮಧ್ಯಾಹ್ನದ ಬಿಸಿಯೂಟವನ್ನು ನೀಡದಿರುವುದು ಮಕ್ಕಳಲ್ಲಿ ಪೌಷ್ಟಿಕಾಂಶ ಅಸಮಾನತೆ ಉಂಟಾಗಲು ಕಾರಣವಾಗಿದೆ.”
ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರವನ್ನು ಸರಿಯಾಗಿ ಸೇವಿಸದಿರುವುದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ೨೦೧೩ ರ ಅನುಸೂಚಿ ೨ ರಲ್ಲಿ ನಿಗಧಿಪಡಿಸಲಾಗಿರುವ ಪ್ರೊಟೀನ್ ಹಾಗೂ ಕ್ಯಾಲೋರಿ ಅಗತ್ಯತೆಗಳನ್ನು ಉಲ್ಲಂಘಿಸದಂತಾಗುತ್ತದೆ. ನಮ್ಮ ಸತ್ಯ ಶೋಧನಾ ಭೇಟಿಯ ವೇಳೆ ನಾವು ಭೇಟಿ ನೀಡಿದ ಹಲವು ಶಾಲೆಗಳಲ್ಲಿ ನಮಗೆ ಕಂಡುಬಂದದ್ದೇನೆಂದರೆ, ಹಲವು ಶಾಲೆಗಳಲ್ಲಿ ಶಾಲಾಧಾರಿತ ಅಡಿಗೆಮನೆಗಳನ್ನು ನಿರ್ಮಿಸಲು ಸೂಕ್ತ ಸ್ಥಳಾವಕಾಶ ಇರುವುದಲ್ಲದೆ, ಕೇಂದ್ರೀಕೃತ ಅಡಿಗೆಮನೆ ವ್ಯವಸ್ಥೆಗೆಂದು ಎನ್‌ಜಿಓಗಳಿಗೆ ನೀಡುವುದಕ್ಕೂ ಮುಂಚಿತವಾಗಿ ಹಲವು ಶಾಲೆಗಳು ಶಾಲಾಧಾರಿತ ಅಡಿಗೆ ಮನೆಗಳನ್ನು ನಿರ್ವಹಿಸುತ್ತಿರುತ್ತವೆ. ಆದ್ದರಿಂದ, ಅಡಿಗೆಮನೆಗಳನ್ನು ನಿರ್ಮಿಸಲು ಸ್ಥಳಾವಕಾಶವನ್ನು ಹೊಂದಿರುವ ಶಾಲೆಗಳು ಹಾಗೂ ಈಗಾಗಲೇ ಅಡಿಗೆಮನೆಯನ್ನು ಹೊಂದಿರುವ ಶಾಲೆಗಳನ್ನು ಮತ್ತೆ ಶಾಲಾಧಾರಿತ ಅಡಿಗೆಮನೆ ವ್ಯವಸ್ಥೆಯಡಿ ತರಬೇಕು ಹಾಗೂ ಏಕಾಏಕಿ ಅವುಗಳನ್ನು ಎನ್‌ಜಿಓಗಳಿಗೆ ನೀಡುವುದಕ್ಕೆ ಬದಲಾಗಿ ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ.
ಸೂಚಿತ ಆಹಾರಪಟ್ಟಿಯನ್ನು ಪಾಲಿಸದಿರುವುದು: ಕಾಯ್ದೆಯು ಸೂಚಿಸುವ ಪೌಷ್ಟಿಕಾಂಶ ಗುಣಮಟ್ಟಗಳನ್ನು ಪಾಲಿಸದಿರುವುದರ ಹೊರತಾಗಿ, ಅನೇಕ ಎನ್‌ಜಿಓಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಚಿಸಿರುವ ನಿಯಮ ಮತ್ತು ನಿಬಂಧನೆಗಳನ್ನು ಅನುಸರಿಸದೆ, ಒಪ್ಪಂದದ ಮಾರ್ಗಸೂಚಿಗಳನ್ನು ಧೈರ್ಯದಿಂದಲೇ ಉಲ್ಲಂಘಿಸುತ್ತಿವೆ. ಯೋಜನಾ ಮೌಲ್ಯಮಾಪನ ಮಂಡಳಿಯ ಸಭೆಯೊಂದು ಬೆಂಗಳೂರು (ನಗರ) ಹಾಗೂ ಧಾರವಾಡವನ್ನು ವಿಶೇಷವಾಗಿ ಗಮನವಹಿಸಬೇಕಾದ ಜಿಲ್ಲೆಗಳು (ಆಹಾರ ಧಾನ್ಯಗಳ ಅಸಮಂಜಸ ಉಪಯೋಗ ಹಾಗೂ ಕಡಿಮೆ ಮಕ್ಕಳನ್ನು ಒಳಗೊಂಡಿರುವುದು) ಎಂದು ೨೦೧೩ ರಲ್ಲಿ ವರದಿ ಮಾಡಿದೆ. (ಅನುಬಂಧ ೫) ಇದರ ಬೆನ್ನಲ್ಲೇ, ಅಂದಿನ ಕರ್ನಾಟಕದ ಸರ್ಕಾರದ ಸಾರ್ವಜನಿಕ ಶಿಕ್ಷಣ ಆಯುಕ್ತರು ನೀಡಿದ ಹಲವು ಕಾರಣಗಳನ್ನು ಪರಾಮರ್ಶಿಸಿದ ನಂತರ ಸರ್ಕಾರವು ಒಂದು ಆಹಾರಪಟ್ಟಿಯನ್ನು ನಿಗಧಿಪಡಿಸಿತು.
“ಕರ್ನಾಟಕದಾದ್ಯಂತ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಆಹಾರವನ್ನು ಪೂರೈಸುತ್ತಿರುವ ಎನ್‌ಜಿಓಗಳು ಒಂದೇ ರೀತಿಯ ಆಹಾರವನ್ನು ಅಂದರೆ ಸ್ಥಳೀಯ ಆಹಾರ ಪದ್ಧತಿಯಂತೆ ವಿವಿಧ ಆಹಾರ ಸಾಮಾಗ್ರಿಗಳನ್ನು ಬಳಸದೆ ಒಂದೇ ರೀತಿಯ ತರಕಾರಿಗಳನ್ನು ಹಾಕಿ ಸಿದ್ಧಪಡಿಸಿದ ಆಹಾರವನ್ನೇ ಪ್ರತಿದಿನವೂ ನೀಡುತ್ತಿರುವುದು ಹಾಗೂ ತಮ್ಮ ಸಂಸ್ಥೆಗಳ ಆಹಾರ ಪದ್ಧತಿಯನ್ನು ಮಾತ್ರ ಬಳಸಿಕೊಂಡು ಮಕ್ಕಳಿಗೆ ಆಹಾರವನ್ನು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದ ಮಕ್ಕಳು ಸಂತೋಷವಾಗಿ ಊಟ ಮಾಡದಿರುವುದ ಒಂದೆಡೆಯಾದರೆ, ಶಾಲಾ ಸಂಸ್ಥೆಗಳೂ ಸಹ ಈ ಆಹಾರಕ್ಕೆ ಅಸಮಧಾನವನ್ನು ವ್ಯಕ್ತಪಡಿಸಿವೆ. ಇದು ಮಾತ್ರವಲ್ಲದೆ, ಶಾಲೆಗಳಿಗೆ ಭೇಟಿಯ ವೇಳೆಯಲ್ಲಿ ಮಕ್ಕಳೂ ಸಹ ಇದೇ ಆಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.”
ಈ ಮೇಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಳಗೊಂಡಂತೆ, ಕರ್ನಾಟಕ ಸರ್ಕಾರವು ಒಂದು ಆಹಾರಪಟ್ಟಿಯನ್ನು ಸಿದ್ಧಪಡಿಸಿತು. ಸರ್ಕಾರದ ಈ ಅಧಿಸೂಚನೆಯ ಹೊರತಾಗಿಯೂ ಸಹ, ಕರ್ನಾಟಕದಲ್ಲಿ ಆಹಾರವನ್ನು ಪೂರೈಸುತ್ತಿರುವ ದೊಡ್ಡ ಎನ್‌ಜಿಓಗಳಲ್ಲಿ ಒಂದಾಗಿರುವ ಅಕ್ಷಯಪಾತ್ರ ಫೌಂಡೇಶನ್ ತಮ್ಮ ಧಾರ್ಮಿಕ ನಂಬಿಕೆಗಳ ಕಾರಣ ಈ ಆಹಾರಪಟ್ಟಿಯನ್ನು ಪಾಲಿಸಲು ನಿರಾಕರಿಸಿದೆ. ಮೈಸೂರಿನಲ್ಲಿರುವ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆಯ ಅಧ್ಯಯನದ ಪ್ರಕಾರ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳು ಕಬ್ಬಿಣಾಂಶ ಮತ್ತು ಜಿಂಕ್ ಅಂಶವನ್ನು ಸಸ್ಯಾಧಾರಿತ ಆಹಾರಕ್ರಮದಿಂದ ಹೀರಿಕೊಳ್ಳುತ್ತವೆ ಎಂಬುದು ಸಾಭೀತಾಗಿದೆ. (ಅನುಬಂಧ ೬).
ಕರ್ನಾಟಕದಲ್ಲಿ ಶಾಲೆಗೆ ಹೋಗುತ್ತಿರುವ ವಯೋಮಾನದ ಮಕ್ಕಳಲ್ಲಿ ಈ ಎರಡು ಪೌಷ್ಟಿಕಾಂಶಗಳ ಕೊರತೆ ಅಧಿಕ ಪ್ರಮಾಣದಲ್ಲಿರುವುದು ಕಂಡುಬಂದಿದೆ. ಇದೇ ರೀತಿ ಪ್ರಮುಖವಾಗಿ, ಸರ್ಕಾರಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಶೇ. ೯೪ ರಷ್ಟು ಮಕ್ಕಳು ಎಸ್‌ಸಿ, ಎಸ್‌ಟಿ ಹಾಗೂ ಇತರೆ ಹಿಂದುಳಿದ ಸಮುದಾಯಗಳಿಗೆ ಸೇರಿರುವ ಮಕ್ಕಳಾಗಿದ್ದು, ಅವರ ಸಾಂಪ್ರದಾಯಿಕ ಆಹಾರವು ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮೊಟ್ಟೆಗಳಂತ ಆಹಾರ ಸಾಮಾಗ್ರಿಗಳನ್ನು ಯಥೇಚ್ಛವಾಗಿ ಒಳಗೊಂಡಿದೆ. (ಉಲ್ಲೇಖ: ಯುಡಿಐಎಸ್‌ಇ ವರದಿ ೨೦೧೭-೧೭ {ಕರ್ನಾಟಕ}).
ಹೆಚ್ಚುವರಿಯಾಗಿ, ಸರ್ಕಾರವು ನಿಗಧಿಪಡಿಸಿರುವ ಆಹಾರಪಟ್ಟಿಯ ನಿಯಮಗಳನ್ನು ಪಾಲಿಸದಿರುವುದು ಕಳೆದ ಹಲವಾರು ವರ್ಷಗಳಿಂದ ಅಕ್ಷಯಪಾತ್ರ ಫೌಂಡೇಶನ್ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ. ಇದಕ್ಕೂ ಮಿಗಿಲಾಗಿ, ಈ ಮೇಲೆ ತಿಳಿಸಿದಂತೆ, ಇಲ್ಲಿ ವೈಯಕ್ತಿಕ ಧಾರ್ಮಿಕ ಆಚರಣೆಗಳನ್ನು ಪಾಲಿಸುವುದನ್ನು . ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೧೭ ರಲ್ಲಿ ನೀಡಿರುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಸಿವಿಲ್ ಸೊಸೈಟಿ ಸಂಸ್ಥೆಗಳು (ಎನ್‌ಎಸ್‌ಓ) / ಸರ್ಕಾರೇತರ ಸಂಘ ಸಂಸ್ಥೆ (ಎನ್‌ಜಿಓ) ಗಳ ಕಾರ್ಯನಿರ್ವಹಿಸುವಿಕೆ ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ ನಿಷೇಧಿಸಲಾಗಿರುತ್ತದೆ.
ಆದ್ದರಿಂದ, ಅಕ್ಷಯಪಾತ್ರ ಫೌಂಡೇಶನ್ ಎಂಬ ಸಂಸ್ಥೆಯೂ ಸೇರಿದಂತೆ ಇತರೆ ಎಲ್ಲಾ ಸಂಸ್ಥೆಗಳಿಗೆ ಧಾರ್ಮಿಕ ನಂಬಿಕೆ ಆಚರಣೆಯ ಆಧಾರದ ಮೇಲೆ ನೀಡಿರುವ ವಿನಾಯಿತಿಗಳನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಸರ್ಕಾರವು ಸೂಚಿಸಿರುವ ಆಹಾರಪಟ್ಟಿಯನ್ನು ಖಡ್ಡಾಯವಾಗಿ ಪಾಲಿಸುವಂತೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇವೆ.
ತಮ್ಮ ವಿಶ್ವಾಸಿಗಳು,
- Siddharth Joshi, Independent Researcher
- Dr. Sylvia Karpagam, Public Health Doctor and Researcher.
- Prof. Mohan Rao (retd.)
- Swarna Bhat
- Dr. Veena Shatrughna, Retd Deputy Director, National Institute of Nutrition, Hyderabad
- Mamatha Yajman, Anekal
- Niranjanaradhya V. P.
- Ashok Kumar S.
- Vidya Dinker, Mangaluru