ಸಸ್ಯಾಧಾರಿತ ಆಹಾರವನ್ನು ಮಾತ್ರವೇ ಹೇರಿಕೆ ಮಾಡುವ ದಿ ಈಟ್ ಲ್ಯಾನ್ಸೆಟ್ ಆಯೋಗದ ವರದಿ ಅಥವಾ ಈ ಕುರಿತ ಇನ್ನಿತರ ಗುಂಪುಗಳ ವರದಿಗಳನ್ನು ಭಾರತವು ತಿರಸ್ಕರಿಸಬೇಕು

Image Source: Eat Lancet launch

ಸಸ್ಯಾಧಾರಿತ ಆಹಾರವನ್ನು ಮಾತ್ರವೇ ಹೇರಿಕೆ ಮಾಡುವ ದಿ ಈಟ್ ಲ್ಯಾನ್ಸೆಟ್ ಆಯೋಗದ ವರದಿ ಅಥವಾ ಈ ಕುರಿತ ಇನ್ನಿತರ ಗುಂಪುಗಳ ವರದಿಗಳನ್ನು ಭಾರತವು ತಿರಸ್ಕರಿಸಬೇಕು

ಡಾ. ಸಿಲ್ವಿಯಾ ಕರ್ಪಗಂ

“10 ಬಿಲಿಯನ್ ಜನರ ಭವಿಷ್ಯದ ಜನಸಂಖ್ಯೆಗೆ ನಮ್ಮ ಗ್ರಹದ ಸರಹದ್ದಿನೊಳಗೆಯೇ ಆರೋಗ್ಯಕರ ಆಹಾರವನ್ನು ನಾವು ಒದಗಿಸಬಹುದೇ?” ಎಂಬ ಪ್ರಶ್ನೆಯ ಜೊತೆಗೆ, ಭಾರತದ ರಾಜಧಾನಿ ದೆಹಲಿಯಲ್ಲಿರುವ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ದ ಕೇಂದ್ರ ಕಚೇರಿಯಲ್ಲಿ ಏಪ್ರಿಲ್ 04, 2019 ರಂದು ಆಹಾರ, ಗ್ರಹ ಮತ್ತು ಆರೋಗ್ಯದ ಕುರಿತ ದಿ ಈಟ್ ಲ್ಯಾನ್ಸೆಟ್ ಆಯೋಗವನ್ನು ಸ್ಥಾಪಿಸಲಾಯಿತು. ಇಎಟಿ (ಈಟ್) ವೇದಿಕೆಯ ಡಾ. ಬ್ರೆಂಟ್ ಲೋಕೆನ್ ಇದಕ್ಕೆ “ಹಿನ್ನೆಲೆಯನ್ನು ಗೊತ್ತುಮಾಡಿ” ಈ ವರದಿಯ ಪ್ರಮುಖ ಸಂಶೋಧನೆಗಳನ್ನು ಪರಿಚಯಿಸಿದರು ಹಾಗೂ ಗ್ಲೋಬಲ್ ಅಲಯಾನ್ಸ್ ಫಾರ್‍ಇಂಪ್ರೂವ್ಡ್ ನ್ಯೂಟ್ರಿಷನ್ (ಜಿಎಐಎನ್) ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಡಾ. ಲಾರೆನ್ಸ್ ಹಡ್ಡಾಡ್ ತಮ್ಮ ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. 37 ಸದಸ್ಯ ಬಲದ ದಿ ಈಟ್ ಲ್ಯಾನ್ಸೆಟ್ ಆಯೋಗದಲ್ಲಿ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್‍ಎಫ್‍ಐ) ದ ಅಧ್ಯಕ್ಷ ಡಾ. ಕೆ. ಶ್ರೀನಾಥ್ ರೆಡ್ಡಿ ಹಾಗೂ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್‍ವಿರಾನ್ಮೆಂಟ್ (ಸಿಎಸ್‍ಇ) ನ ಡಾ. ಸುನಿತಾ ನರೈನ್ ಅವರು ಮಾತ್ರವೇ ಇದರಲ್ಲಿ ಭಾಗವಹಿಸಿದ ಭಾರತದ ಇಬ್ಬರು ಪ್ರತಿನಿಧಿಗಳಾಗಿದ್ದರು.

ಈ ವರದಿಯು ಕೇವಲ ಸುಳ್ಳುಗಳು, ಅರ್ಧಸತ್ಯಗಳು ಹಾಗೂ ಅವೈಜ್ಞಾನಿಕ ಪರಿಭಾಷೆಯಿಂದಕೂಡಿದೆ. ಈಗಾಗಲೇ ದೊಡ್ಡ ಮಟ್ಟಿಗಿನ ಅಪೌಷ್ಟಿಕತೆಯ ಪ್ರಮಾಣದಿಂದ ಬಳಲುತ್ತಿರುವ ಭಾರತವನ್ನು ಈ ವರದಿಯು ಮತ್ತಷ್ಟು ದುಸ್ಥಿತಿಗೆ ತಳ್ಳಬಹುದಾದ ಅಂಶಗಳನ್ನು ಹೊಂದಿದ್ದರೂ ಸಹ, ಭಾರತದಿಂದ ಅಧಿಕೃತವಾಗಿ ಈ ಸಭೆಯ ಸದಸ್ಯರುಗಳಾಗಿದ್ದ ಡಾ. ಶ್ರೀನಾಥ್ ರೆಡ್ಡಿ ಮತ್ತು ಡಾ. ಸುನಿತಾ ನರೈನ್ ಅವರು ಈ ವರದಿಗೆ ಯಾವುದೇ ಆಕ್ಷೇಪವನ್ನು ಸಲ್ಲಿಸಿರುವುದಿಲ್ಲ ಎಂಬುದು ಆಘಾತಕಾರಿ ಮತ್ತು ಆಶ್ಚರ್ಯವೂ ಆಗಿದೆ. ಈ ವರದಿಯ ಅತ್ಯಂತ ಸಮಸ್ಯಾತ್ಮಕ ಅಂಶಗಳನ್ನು ಈ ಕೆಳಗೆ ಎತ್ತಿತೋರಿಸಲಾಗಿದೆ.

ಈ ವರದಿ ಹೀಗೆ ಹೇಳುತ್ತದೆ: “ಈ ಆಯೋಗವು ನಿಗಧಿಪಡಿಸಿದ ವೈಜ್ಞಾನಿಕ ಗುರಿಗಳು ಸಸ್ಯಾಧಾರಿತ ಆಹಾರ ಸೇವಿಸುವದನ್ನು ಹೆಚ್ಚುಮಾಡುವ ಹಾಗೂ ಪ್ರಾಣಿಮೂಲ ಆಹಾರ ಸೇವಿಸುವುದನ್ನು ಕಡಿಮೆ ಮಾಡುವ ಕುರಿತ ಅವಶ್ಯಕ ಪಲ್ಲಟಕ್ಕೆ ಮಾರ್ಗಸೂಚಿಗಳನ್ನು ನೀಡುತ್ತದೆ.” ಎಫ್‍ಎಸ್‍ಎಸ್‍ಐ ಸೇರಿದಂತೆ ಭಾರತ ಸರ್ಕಾರದ ವಿವಿಧ ಸಂಸ್ಥೆಗಳು ಸಹ ಭಾಗವಾಗಿರುವ, ಹಲವು ದೇಶಗಳಿಂದ ಆರಿಸಲ್ಪಟ್ಟ 37 ಜನರ ಗುಂಪೊಂದು, ಆಹಾರದ ಕುರಿತು ಗುರಿಗಳನ್ನು ಸೃಷ್ಟಿಸಿ, ಆಹಾರದ ಕುರಿತು ನಿಯಮಗಳನ್ನು ರೂಪಿಸುವುದು ಅತ್ಯಂತ ಆಘಾತಕಾರಿಯಾಗಿದೆ. ಬ್ರೆಂಟ್ ಲೋಕೆನ್ ಸಸ್ಯಾಧಾರಿತ ಆಹಾರವನ್ನು “ಜಗತ್ತಿಗೆ ತೋರಿಸುವಲ್ಲಿ ಉದಾಹರಣೆ” ಯಾಗಿದೆ ಎಂದು ಭಾರತವನ್ನು ಹೊಗಳುತ್ತಾರೆ; ಏಕೆಂದರೆ ಪ್ರೋಟೀನ್ ಮೂಲಗಳು ಹೆಚ್ಚು ಕಂಡುಬರುವುದು ನಮ್ಮಲ್ಲಿನ ಸಸ್ಯ ಸಂಪತ್ತಿನಿಂದ. ಆದರೆ, ಭಾರತದಲ್ಲಿ ಈಗಾಗಲೇ ದೊಡ್ಡ ಮಟ್ಟಿಗಿರುವ ಅಪೌಷ್ಟಿಕತೆ, ಶಕ್ತಿ ಕುಂಠಿತತೆ, ಅನೀಮಿಯ, ಪೋಷಕಾಂಶಗಳ ಕೊರತೆಯಿಂದ ಉದ್ಭವಿಸಿರುವ ರೋಗಗಳು ಮತ್ತು ಇತರೆ ಅಪೌಷ್ಟಿಕತೆಯ ನಕಾರಾತ್ಮಕ ಫಲಿತಾಂಶಗಳ ಕುರಿತು ಅವರಿಗೆ ಮಾಹಿತಿ ಇಲ್ಲವೇ? ಭಾರತದಲ್ಲಿ ಮಾಂಸಾಹಾರಿಗಳು ಇಲ್ಲವೇಇಲ್ಲ ಎಂಬಂತೆ ಇವರು ಸಸ್ಯಾಧಾರಿತ ಆಹಾರಗಳ ಕುರಿತು ಬಹಳ ಒತ್ತುನೀಡಿ ಮಾತನಾಡುತ್ತಾರೆ. ಶೇ. 80% ರಷ್ಟು ಮಾಂಸಹಾರಿಗಳೇ ಇರುವ ಈ ದೇಶದಲ್ಲಿ ಈ ರೀತಿಯ ತಪ್ಪು ಕಲ್ಪನೆಗಳು ಹಳೆಯ ಕಾಲದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದ ಸಸ್ಯಹಾರಿಗಳು ಇತರರ ಆಹಾರ ನೀತಿಗಳನ್ನು ರೂಪಿಸುತ್ತಿದ್ದ ಸಂಪ್ರದಾಯವನ್ನು ಮತ್ತೆ ಜಾರಿಗೆ ತರುವಲ್ಲಿ ಪ್ರಯತ್ನಿಸುತ್ತದೆ ಮಾತ್ರವಲ್ಲದೆ, ಬಹುಸಂಖ್ಯಾತರ ಆಹಾರಕ್ರಮಗಳನ್ನು ಅಪರಾಧೀಕರಿಸುವುದಲ್ಲದೆ, ಅವುಗಳನ್ನು ಅಳಿಸಿಹಾಕುತ್ತದೆ.

ಡೈರಿ ಉತ್ಪನ್ನಗಳ ಸೇವನೆ ಶೂನ್ಯ ಪ್ರಮಾಣಕ್ಕೆ ತಲುಪಬೇಕು ಮತ್ತು ಭಾರತದ ಆಹಾರಕ್ರಮವು ಈಗಾಗಲೇ ಈ ಆಯೋಗವು ನಿಗಧಿಪಡಿಸಿದ ಗುರಿಗಳೊಳಗೆ ಇದೆ ಎಂದೂ ಸಹ ಇವರು ಹೇಳುತ್ತಾರೆ. “ಭಾರತದ ಆಹಾರಕ್ರಮ” ಎಂದರೆ ಏನು? ಇದು ಜಾತಿ, ಧರ್ಮ, ಭೌಗೋಳಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಹೊಂದಿರದ ಏಕರೂಪ ಆಹಾರಕ್ರಮವೇ? ಧೀರ್ಘಕಾಲದ ಶಕ್ತಿಯ ಕೊರತೆಯುಳ್ಳ ಭಾರತೀಯರು ಇದರ ಗುರಿಯೇ? ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗು ಇದರ ಗುರಿಯೇ? ಅಥವಾ ರಕ್ತಹೀನತೆ ಸಮಸ್ಯೆಯನ್ನು ಹೊಂದಿರುವ ಹರೆಯದವರು ಇದರಗುರಿಯೇ?

ಈ ವರದಿಯ ಲೋಕಾರ್ಪಣೆ ಕಾರ್ಯಕ್ರಮದ ಸಹ-ಅತಿಥೇಯ ಸಂಸ್ಥೆಯಾಗಿದ್ದ ಗ್ಲೋಬಲ್ ಅಲಯಾನ್ಸ್ ಫಾರ್‍ಇಂಪ್ರೂವ್ಡ್ ನ್ಯೂಟ್ರಿಷನ್ (ಜಿಎಐಎನ್) ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಡಾ. ಲಾರೆನ್ಸ್ ಹಡ್ಡಾಡ್ ಕೆಂಪು ಮಾಂಸದ ಉತ್ಪಾದನೆಯು ದೊಡ್ಡ ಮಟ್ಟದಲ್ಲಿ ಕಡಿಮೆಯಾಗಬೇಕು ಎಂದು ಹೇಳುತ್ತಾರೆ. ಮುಂದುವರೆದು ಮಾತನಾಡುವ ಇವರು ಈ ಕುರಿತು ಹದಿಹರೆಯದವರನ್ನು ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೂಲಕ ಗುರಿಯಾಗಿಸಿಕೊಳ್ಳಬೇಕು ಎಂದು ಹೇಳುವುದಲ್ಲದೆ, ಇದು ಹೇಗೆ ಆಹಾರ ಕ್ಷೇತ್ರಕ್ಕೆ ಪೂರಕವಾಗಿದೆ ಎಂಬುದನ್ನು ಹೇಳುತ್ತಾರೆ. “ಹದಿಹರೆಯದ ಮಕ್ಕಳನ್ನು ನಾವು ಮೊದಲು ಹಿಡಿಯಬೇಕು. ನಾವು ಅವರ ಆಹಾರ ಕ್ರಮವನ್ನು ರೂಪಿಸಬೇಕು.” ಆಹಾರ ಎಂಬುದು ಕೇವಲ ಆಹಾರ ಮಾತ್ರವಾಗಿ ಉಳಿಯದೆ ಎಲ್ಲಾ ವಿಧದ ಜೀವಕ್ಕೆ ಅಪಾಯಕಾರಿ ಎನಿಸುವ ಅಂಶಗಳ ಮೊತ್ತವಾಗಿ ಹಾಗೂ ಅವೈಜ್ಞಾನಿಕ ಜಾತಿ ಹೇರಿಕೆಯ ವಸ್ತುವಾಗಿರುವ ಈ ದೇಶದಲ್ಲಿ ಈ ರೀತಿಯ ಭಾಷೆ ದಮನಕಾರಿ ಎಂದಷ್ಟೇ ನಾವು ಅತ್ಯಂತ ಸಂಭಾವಿತ ರೀತಿಯಲ್ಲಿ ಹೇಳಬಹುದು. ಡೈರಿ ಉತ್ಪನ್ನಗಳನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಹೇಳುವ ಇವರಿಗೆ ಜಾನುವಾರುಗಳು ಈಗಲೂ ಸಹ ಸಾಂಕ್ರಮಿಕದ ಸಂಧರ್ಭದಲ್ಲಿ ಅಥವಾ ಇನ್ಯಾವುದೇ ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಬಡವರಿಗೆ, ಹಳ್ಳಿಯ ಅನಕ್ಷರಸ್ಥರಿಗೆ ಆರ್ಥಿಕ ಸ್ವಾವಲಂಬನೆಯ ಮಾರ್ಗವಾಗಿದೆ ಎಂಬುದು ಇವರಿಗೆ ತಿಳಿದಿಲ್ಲವೇ? ಇದರಿಂದ ನಮಗೆ ತಿಳಿಯುವ ಅಂಶವೇನೆಂದರೆ ಜಿಎಐಎನ್ ಸಂಸ್ಥೆಯು ದೊಡ್ಡ ಪ್ರಮಾಣದ ಧವಸ ಧಾನ್ಯಗಳು ಮತ್ತು ಎಣ್ಣೆಯ ಸಂಗ್ರಹದಲ್ಲಿ ತೊಡಗಿದೆ. ಇದನ್ನು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವೂ ಸಹ ಬೆಂಬಲಿಸುತ್ತಿದೆ. ಅಂತಿಮವಾಗಿ, ಇದು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾತ್ರ ಲಾಭದಾಯಕವಾಗಿರುತ್ತದೆ. ಈ ದೊಡ್ಡ ಪ್ರಮಾಣದ ಸಂಗ್ರಹದ ಕುರಿತು ಸಾರ್ವಜನಿಕ ವಲಯದಿಂದ ಅನೇಕ ಟೀಕೆಗಳು ವ್ಯಕ್ತವಾಗಿವೆ. ಕೋಕ್ರೇನ್ ವಿಮರ್ಶೆಯೊಂದರ ಪ್ರಕಾರ ಅಕ್ಕಿಯ ದೊಡ್ಡ ಮಟ್ಟಿಗಿನ ಸಂಗ್ರಹವು ರಕ್ತಹೀನತೆ ಅಥವಾ ವಿಟಮಿನ್ ಎ ಕೊರತೆಯನ್ನೇನೂ ನೀಗಿಸುವುದಿಲ್ಲ. ದೇಶದಲ್ಲಿನ ಅಪೌಷ್ಟಿಕತೆಗೆ ಪರಿಹಾರವಾಗಿರುವ ಪ್ರಾಣಿಮೂಲ ಆಹಾರಗಳನ್ನು ವ್ಯವಸ್ಥಿತವಾಗಿ ಅಳಿಸುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಪ್ರಾಣಿಮಾಂಸ, ಮೊಟ್ಟೆ, ಮೀನು, ಹಾಗೂ ಹಾಲಿನ ಉತ್ಪನ್ನಗಳ ಸೇವನೆಯ ಮೂಲಕ ಪಡೆಯಬಹುದಾದ ಅವಶ್ಯಕ ಪೋಷಕಾಂಶಗಳನ್ನು ಈ ಬಹುರಾಷ್ಟ್ರೀಯ ಕಂಪನಿಗಳು ಹೊರತೆಗೆದು, ಅದನ್ನು ಧಾನ್ಯ ಮತ್ತು ಎಣ್ಣೆಗಳಿಗೆ ಸೇರಿಸುತ್ತಿದ್ದಾರೆ. ಬ್ರೆಂಟ್ ಲೋಕೆನ್ ಮತ್ತೆ ಹೀಗೆ ಹೇಳುತ್ತಾರೆ “ಪ್ರೊಟೀನ್ ಮೂಲ ಎಂಬುದು ಸದ್ಯಕ್ಕೆ ಅನೇಕ ವಿವಾದಕ್ಕೆ ಒಳಗಾಗಿದೆ – ನಾವು ಪ್ರೊಟೀನ್‍ಗಳನ್ನು ಎಲ್ಲಿಂದ ಪಡೆಯಬೇಕು? ಪ್ರಾಣಿಮೂಲ ಆಹಾರಗಳಿಂದಲೋ ಅಥವಾ ಸಸ್ಯಮೂಲ ಆಹಾರಗಳಿಂದಲೋ? ನನ್ನ ಪ್ರಕಾರ ಇಲ್ಲಿ ಹೇಗೆ ಭಾರತ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಬಹುದು. ಅಧಿಕ ಮಟ್ಟದ ಪ್ರೊಟೀನ್ ಮೂಲಗಳು ಸಸ್ಯಗಳಿಂದ ಬರುತ್ತವೆ. ಇದರಿಂದ ನನಗನಿಸುವುದೇನೆಂದರೆ ಭಾರತದಲ್ಲಿ ಈಗಾಗಲೇ ಹಲವಾರು ವಿಧದ ಸಸ್ಯಗಳಿರುವ ಕಾರಣ, ಈ ನಿಟ್ಟಿನಲ್ಲಿ ಭಾರತ ವಿಶ್ವಕ್ಕೆ ಉದಾಹರಣೆಯಾಗಬುದು.”

ಈ ಆಯೋಗವು ತನ್ನ ವರದಿಯಲ್ಲಿ, ತಮ್ಮ ಶಿಫಾರಸ್ಸುಗಳಲ್ಲಿ 0-2 ವರ್ಷದ ಮಕ್ಕಳನ್ನು ಸೇರಿಸಿರುವುದಿಲ್ಲವೆಂದು ಏಕೆಂದರೆ ಈ ಗುಂಪು “ತಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ವಿಶೇಷ ಅಗತ್ಯತೆಗಳನ್ನು ಹೊಂದಿರುತ್ತಾರೆ. ಆದರೆ ಅವರ ಆಹಾರ ಕ್ರಮವು ಆಹಾರ ವ್ಯವಸ್ಥೆಯ ಮೇಲೆ ಸಣ್ಣಪುಟ್ಟ ಪರಿಣಾಮಗಳನ್ನು ಮಾತ್ರ ಹೊಂದಿದೆ ಏಕೆಂದರೆ ಅವರು ಸುಸ್ಥಿರ ಜನಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದಾರೆ ಮಾತ್ರವಲ್ಲದೆ ಅತ್ಯಂತ ಕಡಿಮೆ ಆಹಾರದ ಅವಶ್ಯಕತೆಯನ್ನು ಹೊಂದಿರುತ್ತಾರೆ.” ಮೊದಲಿಗೆ, ಆಹಾರ ಕ್ರಮಗಳನ್ನು ಗುಂಪುಗಳಾಗಿ ವಿಂಗಡಿಸುವುದೇ ಅತ್ಯಂತ ಹಾಸ್ಯಾಸ್ಪದ ವಿಷಯವಾಗಿದೆ. ಮಕ್ಕಳು ತಮ್ಮ ಕುಟುಂಬ ಹಾಗೂ ಸಮುದಾಯಗಳ ಆಹಾರ ಕ್ರಮಗಳನ್ನು ಪರಿಚಯಿಸಿಕೊಂಡು, ಆಳವಡಿಸಿಕೊಳ್ಳುತ್ತಾರೆ. 2 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ಅವರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾದ ಆಹಾರವನ್ನು ನೀಡಬೇಕೆಂದು ಈ ವರದಿಯು ಹೇಳುತ್ತದೆ. ಆದರೆ ಇದು 2 ವರ್ಷದ ನಂತರ ಅವಶ್ಯಕವಾಗಿಲ್ಲವೇ? ಮಕ್ಕಳು ಹದಿಹರೆಯದವರೆಗೂ ಅತೀ ವೇಗವಾಗಿ ಬೆಳವಣಿಗೆಯನ್ನು ಹೊಂದುತ್ತಾರೆ, ಆದ್ದರಿಂದ ಅವರಿಗೆ ಪೋಷಕಾಂಶಯುಕ್ತ ಆಹಾರದ ಅವಶ್ಯಕತೆ ಇದೆ ಎಂದು ಇವರಿಗೆ ಅನಿಸುವುದಿಲ್ಲವೇ? 2 ವರ್ಷದವರೆಗೆ ಮಾತ್ರ ಮಕ್ಕಳಿಗೆ ಹಾಲು, ಮೊಟ್ಟೆ, ಮಾಂಸವನ್ನು ನೀಡಿ ಆನಂತರ ಅವರಿಗೆ ಇದ್ಯಾವುದನ್ನೂ ನೀಡಬಾರದೆ? ಪೋಷಕರು ಹಾಗೂ ಅವರ ಕುಟುಂಬದವರು ತಿನ್ನುವ ಆಹಾರಕ್ಕಿಂತ ಭಿನ್ನ ಆಹಾರವನ್ನು ಮಕ್ಕಳಿಗೆ ನೀಡಬೇಕೆ? 2 ವರ್ಷದ ತಮ್ಮ ಅಥವಾ ತಂಗಿಗೆ ನೀಡಿರುವ ಮೊಟ್ಟೆಯನ್ನು 3 ವರ್ಷದ ಅಣ್ಣ ಅಥವಾ ಅಕ್ಕನಿಗೆ ನೀಡಬಾರದೆ? ಈ ಶಿಫಾರಸ್ಸುಗಳು ನೇರವಾಗಿ ಕುಟುಂಬಗಳಲ್ಲಿರುವ ತಿನ್ನುವ ಹಾಗೂ ಹಂಚಿಕೊಳ್ಳುವ ಸಾಂಪ್ರದಾಯಿಕ ಆಹಾರ ಸಂಸ್ಕøತಿಗಳನ್ನು ನಾಶಮಾಡುವಲ್ಲಿ ಕಾರ್ಯಪ್ರವೃತ್ತವಾಗುತ್ತವೆ.

ಮುಂದುವರೆದು ಈ ವರದಿಯು “ಹದಿಹರೆಯದ ಹೆಣ್ಣುಮಕ್ಕಳು ತಮ್ಮ ವೇಗದ ಬೆಳವಣಿಗೆ ಹಾಗೂ ಮುಟ್ಟಿನ ರಕ್ತಸ್ರಾವದ ಕಾರಣದಿಂದಾಗಿ ಕಬ್ಬಿಣಾಂಶ ಕೊರತೆಯ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. ಕೆಂಪು ಮಾಂಸದ ಅತಿಯಾದ ಸೇವನೆಗೆ ಕೆಲವೊಮ್ಮೆ ಈ ರಕ್ತಸ್ರಾವವು ಕಾರಣವಾಗಿರುತ್ತದೆ. ಆದರೆ ಹೆಚ್ಚು ವಿಟಮಿನ್‍ಗಳು ಅಥವಾ ಹೆಚ್ಚು ವಿಟಮಿನ್‍ಗಳ ಸಿದ್ಧಪಡಿಸುವಿಕೆ ಇದಕ್ಕೆ ಕಡಿಮೆ ವೆಚ್ಚದ ಪರ್ಯಾಯವನ್ನು ರೂಪಿಸುವುದು ಮಾತ್ರವಲ್ಲದೆ ಹೆಚ್ಚು ಕೆಂಪು ಮಾಂಸ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳಿಂದ ರಕ್ಷಿಸುತ್ತದೆ.” ಪೋಷಕಾಂಶಗಳ ಕೊರತೆಯನ್ನು ನೀಗಿಸಿಕೊಳ್ಳಲು ಹೆಣ್ಣುಮಕ್ಕಳು ಮೆಡಿಸಿನ್‍ಗಳ ಮೊರೆ ಹೋಗಬೇಕೆಂದು ನಿಜವಾಗಿಯೂ ಇವರು ಸಲಹೆ ನೀಡುತ್ತಿದ್ದಾರೆಯೇ? ಅನೀಮಿಯ ಅಥವಾ ರಕ್ತಹೀನತೆಯನ್ನು ಕೇವಲ ಕಬ್ಬಿಣಾಂಶ ಪೂರಕಗಳಿಂದ ಮಾತ್ರ ಹೋಗಲಾಡಿಸಲಾಗುವುದಿಲ್ಲ. ಹಿಮೋಗ್ಲೋಬಿನ್ ಉತ್ಪಾದನೆಗೆ ಒಳ್ಳೆಯ ಗುಣಮಟ್ಟದ ಪ್ರೊಟೀನುಗಳ ಅಗತ್ಯವಿದೆ. ಈ ವರದಿಯ ಲೇಖಕರು ಹೇಗೆ ಪ್ರೊಟೀನ್ ಮೂಲಗಳನ್ನು ನೀಡುವ ಭರವಸೆಯನ್ನು ಹೊಂದಿದ್ದಾರೆ? ಒಂದು ಬಾಟಲಿಯಲ್ಲಿ ಹಾಕಿ ನೀಡುತ್ತಾರೆಯೇ? ಇದೇ ರೀತಿ, ಗರ್ಭಿಣಿಯರ ಕುರಿತು ಈ ತಮ್ಮ ಶಿಫಾರಸ್ಸಿನಲ್ಲಿ ಈ ರೀತಿ ಹೇಳುತ್ತಾರೆ “ಮೂರನೇ ತ್ರೈಮಾಸಿಕದ ಗರ್ಭಾವಸ್ಥೆಯ ಸಂದರ್ಭದಲ್ಲಿ ಭ್ರೂಣವು ಉತ್ತಮ ಬೆಳವಣಿಗೆಯನ್ನು ಹೊಂದಲು ಕೆಲವು ಪ್ರಾಣಿಮೂಲ ಆಹಾರಗಳನ್ನು ಒಳಗೊಳ್ಳುವುದು ಉತ್ತಮವಾದರೂ ಸಹ, ಸರಿಯಾದ ಸಸ್ಯಾಹಾರದ ಆಹಾರಕ್ರಮವು ಸಹ ಭ್ರೂಣವು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಹಕರಿಯಾಗುತ್ತದೆ ಎಂಬುದಕ್ಕೆ ಹಲವು ಪುರಾವೆಗಳಿವೆ. ಅಂದರೆ ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರಕ್ರಮಗಳು ವಿಟಮಿನ್ ಬಿ12 ರ ಪೂರಕಗಳನ್ನು ಸರಿಯಾದ ಪ್ರಮಾಣದಲ್ಲಿ ಒಳಗೊಂಡಿರಬೇಕು.”

ಇನ್ನೂ ಮುಂದುವರೆದು ಮಾತನಾಡುವ ಈ ವರದಿಯು ಭಾರತದಂತಹ ದೇಶಗಳಲ್ಲಿ ಸಾಂಪ್ರದಾಯಿಕ ಆಹಾರಗಳು ಕೇವಲ ವಿಶೇಷ ಸಂದರ್ಭಗಳಲ್ಲಿ ಆಥವಾ ಪೂರಕ ಆಹಾರವಾಗಿ ಮಾತ್ರ ಸೇವಿಸಲಾಗುವ ಕೆಂಪು ಮಾಂಸವನ್ನು ಒಳಗೊಳ್ಳುತ್ತವೆ ಹಾಗೂ ಈ ಸಂಸ್ಕøತಿಗಳ ಹಲವು ಕಡಿಮೆ ಪ್ರಮಾಣದ ಡೈರಿ ಉತ್ಪನ್ನಗಳನ್ನು ಅಥವಾ ಶೂನ್ಯ ಪ್ರಮಾಣದ ಡೈರಿ ಉತ್ಪನ್ನಗಳನ್ನು ಸೇವಿಸಿರುತ್ತಾರೆ, ಹೆಚ್ಚಿನ ಡೈರಿ ಸೇವನೆಯನ್ನು ಹೊಂದಿರುವ ದೇಶಗಳಿಗಿಂತ ಹೆಚ್ಚಾಗಿ ಲ್ಯಾಕ್ಟೋಸ್ ಅಸಹಿಷ್ಣುತೆ ಮತ್ತು ಮೂಳೆ ಮುರಿತದ ಕಡಿಮೆ ದರಗಳಿಗೆ ಅನುಗುಣವಾಗುತ್ತದೆ.”
ಅವರ ಶಿಫಾರಸ್ಸಿನ ಪ್ರಕಾರ (ಕೋಷ್ಟಕ ನೋಡಿ), ಭೀಫ್, ಪೋರ್ಕ್ ಅಥವಾ ಕುರಿಮರಿಯ ಮಾಂಸದಿಂದ ದಿನಕ್ಕೆ 15 ಕ್ಯಾಲೋರಿಗಳಾಗಿರಬೇಕು, ಕೋಳಿಮಾಂಸದಿಂದ ದಿನಕ್ಕೆ 62 ಕ್ಯಾಲೋರಿಗಳಾಗಿರಬೇಕು, ಮೊಟ್ಟೆಗಳಿಂದ ದಿನಕ್ಕೆ 19 ಕ್ಯಾಲೋರಿಗಳಾಗಿರಬೇಕು, ಮೀನಿನಿಂದ ದಿನಕ್ಕೆ 40 ಕ್ಯಾಲೋರಿಗಳಾಗಿರಬೇಕು, ಸೋಯ ಆಹಾರದಿಂದ ದಿನಕ್ಕೆ 112 ಕ್ಯಾಲೋರಿಗಳು, ಅಪರ್ಯಾಪ್ತ ಎಣ್ಣೆಗಳಿಂದ 354 ಕ್ಯಾಲೋರಿಗಳು, ಸಕ್ಕರೆಯಿಂದ 120 ಕ್ಯಾಲೋರಿಗಳು ಮತ್ತು ಡೈರಿ ಉತ್ಪನ್ನಗಳಿಂದ ಶೂನ್ಯವಾಗಿರಬೇಕು.

ರಾಕ್‍ಸ್ಟ್ರಾಮ್, ಈ ವರದಿಯ ಮತ್ತೊಬ್ಬ ಲೇಖಕ ಹೀಗೆ ಹೇಳುತ್ತಾನೆ “ರಾಷ್ಟ್ರಗಳು ನಗರೀಕರಣವಾಗಿ ಹಾಗೂ ಜನರು ಶ್ರೀಮಂತರಾಗುವಾಗ, ಸಾಂಪ್ರದಾಯಿಕ ಆಹಾರಗಳು ಕ್ಯಾಲೋರಿಗಳು, ಪ್ರೊಟೀನುಗಳು, ಮತ್ತು ಮಾಂಸ ಹಾಗೂ ಡೈರಿಯಂತಹ ಪಾಶ್ಚಾತ್ಯ ಶೈಲಿಯ ಪ್ರಾಣಿಮೂಲ ಆಹಾರಗಳಾಗುತ್ತಾ ಬದಲಾಗುತ್ತವೆ.” ಮುಂದುವರೆದು ಮಾತನಾಡುವ ಆತ “ಧವಸ ಧಾನ್ಯಗಳನ್ನೇ ಅತಿ ಹೆಚ್ಚಾಗಿ ಸೇವಿಸಿ ಬದುಕುವ ಜಾನುವಾರುಗಳ ಕ್ಷೇತ್ರವು ಸುಸ್ಥಿರ ಗ್ರಹದ ಅಂತ್ಯದ ಆರಂಭವಾಗಿದೆ ಹಾಗೂ ಹೇಗೆ ಸಾಂಪ್ರದಾಯಿಕ ಆಹಾರಗಳು ಕಾಳು, ಬೀಜ, ಧಾನ್ಯ, ತರಕಾರಿ ಹಾಗೂ ಮೊಳಕೆಗಳಿಂದ ಸಮೃದ್ಧವಾಗಿದ್ದು, ಭೂಮಿಯನ್ನು ನಾಶಪಡಿಸದೆಯೇ ನಮಗೆ ಬೇಕಾದ ಎಲ್ಲಾ ಪೋಷಕಾಂಶಗಳಿಂದ ಕೂಡಿದೆ ಎಂಬುದನ್ನು ಭಾರತವು ವಿಶ್ವಕ್ಕೆ ತೋರಿಸುವಲ್ಲಿ ಉದಾಹರಣೆಯಾಗಬಹುದು.”

ಈ ಮೇಲಿನ ಹೇಳಿಕೆಗಳು ಸತ್ಯವೂ ಅಲ್ಲ ಅಥವಾ ಯಾವ ಪುರಾವೆಯನ್ನೂ ಸಹ ಹೊಂದಿರುವುದಿಲ್ಲ. ಇವು ಕೇವಲ ದಾರಿತಪ್ಪಿಸುವ ಹೇಳಿಕೆಗಳಷ್ಟೇ. ಮಾಂಸ ಸೇವಿಸುವ ಭಾರತದ ಸಂಸ್ಕøತಿಯು ಪಾಶ್ಚಾತ್ಯ ಸಂಸ್ಕøತಿಯಲ್ಲ. ಇಲ್ಲಿನ ಅನೇಕ ಸಮುದಾಯಗಳು ಹಲವಾರು ಪೀಳಿಗೆಗಳಿಂದ ಮಾಂಸವನ್ನು ಸೇವಿಸುತ್ತಾ ಬಂದಿವೆ. ಸಾಂಪ್ರದಾಯಿಕವಾಗಿ ಭಾರತ ಸಸ್ಯಾಹಾರಿ ದೇಶ ಎನ್ನುವುದು ಹಾಗೂ ಮಾಂಸಾಹಾರಿ ಪದ್ಧತಿಯನ್ನು ಪಾಶ್ಚಾತ್ಯ ಸಂಸ್ಕøತಿ ಎನ್ನುವ ವಿವಾದಾತ್ಮಕ ಹೇಳಿಕೆಯು ಭಾರತ ಸಸ್ಯಾಹಾರಿ ದೇಶ ಎಂಬ ಕಪೋಕಲ್ಪಿತ ಸುಳ್ಳನ್ನು ನಿಜವನ್ನು ಮಾಡುವುದಕ್ಕೋಸ್ಕರ ಪಾಶ್ಚಾತ್ಯ ಪ್ರಭಾವವನ್ನು ಪ್ರತಿರೋಧಿಸಬೇಕು ಎನ್ನುವ ದೊಡ್ಡ ವಾದಗಳಿಗೆ ಎಡೆಮಾಡಿಕೊಡುತ್ತದೆ. ಕೆಲವೊಮ್ಮೆ ಭೀಫ್ ಭಾರತದ ಶೋಷಿತ ಸಮುದಾಯಗಳಿಗೆ ಸಿಗುವ ಅತ್ಯಂತ ಕಡಿಮೆ ಬೆಲೆಯ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ ಆದರೆ ಇಲ್ಲಿನ ಜಾತಿ, ಧರ್ಮ, ಆಚಾರ-ವಿಚಾರ, ಸಂಸ್ಕøತಿ, ಭೌಗೋಳಿಕತೆ ಮತ್ತು ಬೆಲೆ ಎಂಬ ವಿವಿಧ ಅಡೆತಡೆಗಳ ಮಧ್ಯೆ ಜನ ಯಾವುದನ್ನು ತಿನ್ನಬೇಕು ಮತ್ತು ಯಾವುದನ್ನು ತಿನ್ನುತ್ತಿದ್ದಾರೆ ಎಂಬುದರ ನಡುವೆ ದೊಡ್ಡ ವ್ಯತ್ಯಾಸವಿರುತ್ತದೆ. ಈ ದೇಶದಲ್ಲಿ ಜಾರಿಗೆ ಬಂದಿರುವ ಅವೈಜ್ಞಾನಿಕ ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳು ಅನೇಕರ ಸಮುದಾಯಗಳನ್ನು, ವಿಶೇಷವಾಗಿ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳನ್ನು ಆರ್ಥಿಕ ಬಡತನಕ್ಕೆ ತಳ್ಳಿದೆ. ಈ ಶೋಷಿತ ಸಮುದಾಯಗಳ ದುರ್ಬಲತೆಯನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿರುವ ದಿ ಈಟ್ ಲ್ಯಾನ್ಸೆಟ್ ಗುಂಪಿನ ನಡೆ ಅಮಾನವೀಯ ಮಾತ್ರವಲ್ಲದೆ ಅತ್ಯಂತ ಲಜ್ಜೆಗೆಟ್ಟ ನಡೆಯಾಗಿದೆ ಎಂದಷ್ಟೇ ಹೇಳಬಹುದು.

ಈ ವರದಿಯು ಮುಂದುವರೆಸುತ್ತಾ, ಭಾರತದ ಅನೇಕ ಸಂಸ್ಕøತಿಗಳಲ್ಲಿ ದ್ವಿದಳ ಧಾನ್ಯಗಳ ಸೇವನೆ ಅಧಿಕ ಪ್ರಮಾಣದಲ್ಲಿದೆ ಎಂದು ಹೇಳುತ್ತದೆ. ಅದಾಗ್ಯೂ, ಈ ದ್ವಿದಳ ಧಾನ್ಯಗಳು ಅನೇಕ ಬಾರಿ ದುಬಾರಿಯಾಗಿದ್ದು, ಇವು ಹಲವರು ಹೇಳುವ ಪ್ರಕಾರ ಉತ್ತಮ ಗುಣಮಟ್ಟದ ಪ್ರೊಟೀನುಗಳ ಮೂಲವಾಗಿದ್ದರೂ ಸಹ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‍ಎಫ್‍ಎಸ್‍ಎ) ಯ ಪ್ರಕಾರ ಇವು ಸುಲಭವಾಗಿ ದಕ್ಕುವ ಆಹಾರಗಳ ವ್ಯಾಪ್ತಿಯ ಭಾಗವಾಗಿರುವುದಿಲ್ಲ. ಇವುಗಳ ಅತ್ಯಂತ ಉತ್ತಮ ಗುಣಮಟ್ಟದ ಪ್ರೊಟೀನುಗಳೂ ಅಲ್ಲ ಹಾಗೂ ಇವುಗಳನ್ನು ಎಲ್ಲ ಜನರು ಸಾಕಷ್ಟು ಸೇವಿಸಲಾಗುವುದಿಲ್ಲ. ಪ್ರೊಟೀನುಗಳು, ವಿಟಮಿನ್‍ಗಳು ಹಾಗೂ ಮಿನರಲ್‍ಗಳ ಕುರಿತ ಇವುಗಳ ಜೈವಿಕ ಲಭ್ಯತೆ ಕೆಳಮಟ್ಟದ್ದಾಗಿರುತ್ತದೆ. ಅಸಮರ್ಪಕ ಆಹಾರ ಕ್ರಮಗಳಾದ ಇವುಗಳಲ್ಲಿನ ನಕಾರಾತ್ಮಕ ಅಂಶಗಳನ್ನು ಪರಿಗಣಿಸಿದೆ ಮುಂದೆ ಹೋಗುವುದು ಈಗಾಗಲೇ ದುರ್ಬಲವಾಗಿರುವ ಸಮುದಾಯಗಳನ್ನು ಮತ್ತಷ್ಟು ಅಪಾಯಕ್ಕೆ ತಳ್ಳುವುದೇ ಆಗಿದೆ. ದಿ ಈಟ್ ಲ್ಯಾನ್ಸೆಟ್ ಲೇಖಕರು ಈ “ಅಗ್ಗದ ಸಸ್ಯಹಾರಿ ಪದ್ಧತಿ” ಯನ್ನು ಭಾರತದ ಪ್ರಚಲಿತ ಅಪೌಷ್ಟಿಕತೆಗೆ ಪ್ರಮುಖ ಕಾರಣವಾಗಿಸುವಲ್ಲಿ ವಿಫಲರಾಗಿದ್ದಾರೆ.

ಈ ವರದಿಯಲ್ಲಿನ ಒಂದು ವಿಲಕ್ಷಣ ಹೇಳಿಕೆ ಹೀಗಿದೆ: ಕೊಬ್ಬು ಹಾಗೂ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವ ಇನ್ನಿತರ ಪದಾರ್ಥಗಳ ಆಹಾರದ ಭಾಗವಾಗಿ ಪ್ರೊಟೀನ್ ಅನ್ನು ಸೇವಿಸುವ ಕಾರಣ, ಪ್ರೊಟೀನ್ ಆಹಾರ ಮೂಲಗಳನ್ನು ಅಥವಾ ಪ್ಯಾಕೇಜುಗಳನ್ನು ತನಿಖೆಗೆ ಒಳಪಡಿಸುವಾಗ ಅಥವಾ ಆಹಾರದ ಆಯ್ಕೆಗಳನ್ನು ಮಾಡುವಾಗ ಪರಿಗಣಿಸಬೇಕು.” ಈ ಹೇಳಿಕೆಯು ಪ್ಯಾಕೇಜ್ ಮಾಡಲಾದ ಆಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿದೆ ಮಾತ್ರವಲ್ಲದೆ ಈ ಪ್ಯಾಕೇಜ್ಡ್ ಆಹಾರಗಳು ಟ್ರಾನ್ಸ್ ಕೊಬ್ಬಿನಾಂಶ, ಸೇರ್ಪಡೆಗಳು ಹಾಗೂ ಸಂರಕ್ಷಕಕಾರಕಗಳ್ನು ಪ್ರೊಟೀನ್ ಮೂಲಗಳಾಗಿ ಹೊಂದಿವೆ.” “ಬಹುತೇಕ ಆಹಾರಗಳು ಪ್ರೊಟೀನುಗಳನ್ನು ಒಳಗೊಂಡರೂ ಸಹ ಮಾಂಸ, ಡೈರಿ ಉತ್ಪನ್ನಗಳು, ಮೀನು, ಮೊಟ್ಟೆ, ದ್ವಿದಳ ಧಾನ್ಯಗಳು, (ಸಾಯ್ ಸೇರಿದಂತೆ), ಬೀಜಗಳು (ಕಡಲೇಬೀಜವೂ ಸೇರಿದಂತೆ) ಹೆಚ್ಚು ಪ್ರೊಟೀನ್ ಪ್ರಮಾಣಗಳನ್ನು ಹೊಂದಿದೆ ಮತ್ತು ಅನೇಕ ಪಾಕ ಸಂಸ್ಕøತಿಗಳ ಪ್ರಕಾರ ಇವು ಒಂದಕ್ಕೊಂದು ಪರ್ಯಾಯಗಳಾಗಿವೆ.” ಇವುಗಳನ್ನು ಒಂದಕ್ಕೊಂದು ಪರ್ಯಾಯವಾಗಿ ಯಾರು ಪರಿಗಣಿಸುತ್ತಾರೆ? ಭಾರತದ ಪೌಷ್ಟಿಕಾಂಶ ತಜ್ಞರೇ? ಈ ರೀತಿಯ ಕ್ಷುಲ್ಲಕ ಹೇಳಿಕೆಗಳು ಮಾನವರಿಗೆ ವಿವಿಧ ರೀತಿಯಲ್ಲಿ ಲಭ್ಯವಿರುವ ಪ್ರೊಟೀನ್ ಮೂಲಗಳನ್ನು ನಾಶಪಡಿಸುತ್ತವೆ. ಪ್ರಾಣಿಮೂಲ ಆಹಾರಗಳು ಮಾತ್ರ ಅತ್ಯಂತ ಹೆಚ್ಚು ಜೈವಿಕ ಲಭ್ಯತೆಯನ್ನು ಹೊಂದಿರುವ ಪ್ರೊಟೀನುಗಳ ಮೂಲವಾಗಿದೆ ಹಾಗೂ ಇವುಗಳನ್ನು ಸಸ್ಯಾಧಾರಿತ ಪ್ರೊಟೀನು ಮೂಲಗಳಿಗೆ ಪರ್ಯಾಯ ಎಂದು ಹೇಳುವುದು ಸ್ಪಷ್ಟವಾಗಿ ತಪ್ಪು ಮಾಹಿತಿಯನ್ನು ನೀಡುವುದು ಹಾಗೂ ದಾರಿ ತಪ್ಪಿಸುವ ಕ್ರಮವಾಗಿದೆ.

ಮೀನುಗಳಲ್ಲಿರುವ ಒಮೆಗಾ 3 ಎಂಬ ಕೊಬ್ಬಿನಾಂಶ ಆಮ್ಲಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣವಾಗಿದ್ದು, ಅವುಗಳ ಹೆಚ್ಚು ಸೇವನೆಯು ಅಧ್ಬುತ ಆರೋಗ್ಯಕ್ಕೆ ಅವಶ್ಯಕವಾಗಿದೆ ಎಂಬ ನಿರಾಕರಿಸಲಾಗದ ಸತ್ಯವನ್ನು ಹೇಳುವ ಈ ವರದಿಯ ಲೇಖಕರು ಮುಂದುವರೆದು, ಇವುಗಳ ಸೇವನೆಯು ದಿನಕ್ಕೆ 0-100 ಗ್ರಾಂಗಳಷ್ಟಿರಬೇಕು ಎಂಬ ಸಲಹೆಯನ್ನು ನೀಡುತ್ತಾರೆ. ಒಮೆಗಾ 3 ಎಂಬ ಕೊಬ್ಬಿನಾಂಶ ಆಮ್ಲಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣವಾಗಿದ್ದು, ಅವುಗಳ ಹೆಚ್ಚು ಸೇವನೆಯು ಅಧ್ಬುತ ಆರೋಗ್ಯಕ್ಕೆ ಅವಶ್ಯಕವಾಗಿದೆ ಎಂದು ತಿಳಿದಿದ್ದರೂ ಸಹ ಯಾಕೆ ಈ ಆಯೋಗವು ಅವುಗಳ ಸೇವನೆಯನ್ನು ದಿನಕ್ಕೆ 0 ಪ್ರಮಾಣದಲ್ಲಿರಬೇಕು ಎಂದು ಸಲಹೆ ನೀಡುತ್ತದೆ? ಇಲ್ಲಿಯೂ ಸಹ ಇದಕ್ಕೆ ಪರ್ಯಾಯವಾಗಿ ಸಸ್ಯಾಧಾರಿತ ಆಹಾರಗಳ ಕುರಿತು ಮಾತನಾಡುವ ಇವರು, “ಸಸ್ಯಮೂಲ ಆಹಾರಗಳಲ್ಲಿರುವ ಅಲಿನೊಲೆನಿಕ್ ಆಮ್ಲವು ಒಮೆಗಾ 3 ಎಂಬ ಕೊಬ್ಬಿನಾಂಶ ಆಮ್ಲಗಳಿಗೆ ಪರ್ಯಾಯವಾಗಬಹುದು (ಆಗುತ್ತದೆ ಎಂದು ಧೃಢೀಕರಿಸಲಾಗುವುದಿಲ್ಲ) ಆದರೆ ಇದರ ಪ್ರಮಾಣವು ಎಷ್ಟಿರಬೇಕು ಎಂಬುದಕ್ಕೆ ಸ್ಪಷ್ಟತೆ ಇಲ್ಲ.” ಎಂದು ಹೇಳುತ್ತಾರೆ. ಇದು ಆಹಾರಕ್ರಮವನ್ನು ಶಿಫಾರಸ್ಸು ಮಾಡುವ ರೀತಿಯೇ? ಪರಿಣಾಮಕಾರಿಯಾಗಿ ಅವರು ಹೇಳಲು ಹೊರಟಿರುವುದೇನೆಂದರೆ, ಮೀನು ಅವಶ್ಯಕವಾದ ಪೌಷ್ಟಿಕಾಂಶಗಳನ್ನು ನೀಡುತ್ತದೆ ಆದರೆ ಸಸ್ಯಗಳು ಅಗಾಧ ಪ್ರಮಾಣದಲ್ಲಿರುವ ಕಾರಣ ನೀವು ಅದನ್ನೇ ತಿನ್ನಬೇಕು. ಆದರೆ ಈ ಸಸ್ಯಗಳ ಉಪಯೋಗದ ಕುರಿತು ನಮಗೆ ಮಾಹಿತಿ ಇಲ್ಲ!

ಈ ವರದಿಯ ಪ್ರಕಾರ “ಮೊಟ್ಟೆಗಳು ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವ ಅತಿ ಹೆಚ್ಚು ಪ್ರೊಟೀನುಗಳನ್ನು ಹೊಂದಿರುವ ಆಹಾರದ ಮೂಲವಾಗಿದೆ ಹಾಗೂ ಇವು ಉತ್ತಮ ಬೆಳವಣಿಗೆಗೆ ಬೇಕಾದ ಎಲ್ಲಾ ಪೂರಕ ಅಂಶಗಳನ್ನು ಒಳಗೊಂಡಿದೆ.” ಹಾಗೂ “ಕಡಿಮೆ ಆದಾಯದ ದೇಶಗಳಲ್ಲಿ, ಹಿಟ್ಟು ಪ್ರಧಾನ ಆಹಾರದಲ್ಲಿರುವ ಕ್ಯಾಲೊರಿಗಳನ್ನು ಮೊಟ್ಟೆಯಿಂದ ಬದಲಿಸುವುದು ಒಂದು ಮಗುವಿನ ಪೌಷ್ಟಿಕ ಆಹಾರವನ್ನು ಗಣನೀಯವಾಗಿ ಸುಧಾರಿಸಬಹುದು ಹಾಗೂ ಮಗುವಿನಲ್ಲಿರುವ ಬೆಳವಣಿಗೆ ಕುಂಠಿತ ಸಮಸ್ಯೆಯನ್ನು ಕಡಿಮೆ ಮಾಡಬಹುದು.” “ದಿನಕ್ಕೆ 13 ಗ್ರಾಂ ನಷ್ಟು ಅಥವಾ ವಾರಕ್ಕೆ 1 ರಿಂದ 5 ಮೊಟ್ಟೆಗಳನ್ನು ಸೇವಿಸುವುದು ಕೆಟ್ಟ ಗುಣಮಟ್ಟದ ಆಹಾರ ಕ್ರಮವನ್ನು ಹೊಂದಿರುವ ಕಡಿಮೆ ಆದಾಯದ ಜನಸಂಖ್ಯೆಗೆ ಪ್ರಯೋಜನಕಾರಿಯಾಗಬಹುದು.” ಹೀಗೆ ಹೇಳಿ ನಂತರ ಇವರು “ಮೊಟ್ಟೆಗಳ ಬದಲಿಗೆ ಸಸ್ಯಗಳ ಐಸೋಕ್ಯಾಲೊರಿಕ್‍ಗಳು ಸಾಂಕ್ರಮಿಕವಲ್ಲದ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.” ಎಂಬ ಒಂದು ನಿಗೂಢ ಹೇಳಿಕೆಯನ್ನು ನೀಡುತ್ತಾರೆ. ಮೊಟ್ಟೆಯು ಹೆಚ್ಚು ಆರೋಗ್ಯಕಾರಕ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದಿದ್ದರೂ ಸಹ, ಈ ವರದಿಯ ಲೇಖಕರು ತಮ್ಮ ಸಾಕುಪ್ರಾಣಿಗಳ ಮೇಲಿನ ಅತೀವ ಮೋಹದಿಂದಾಗಿ, ಇದು ಅವರ ಪ್ರಾಣಿ ಪೂರ್ವಾಗ್ರಹಗಳ ವಿರುದ್ಧವಾಗಿದೆ ಎಂಬ ಮಾತ್ರಕ್ಕೆ ಮೊಟ್ಟೆಯನ್ನು ತಿನ್ನುವುದನ್ನು ಅಪರಾಧೀಕರಿಸುತ್ತಾರೆ. ಬೆಳವಣಿಗೆಗೆ ಹಾಗೂ ಭ್ರೂಣಾವಸ್ಥೆಯಿಂದ ನಾವು ಸಾಯುವವರೆಗೂ ನಮ್ಮ ದೇಹದ ಎಲ್ಲಾ ಅಂಗಾಶಗಳಿಗೆ ಪ್ರೊಟೀನುಗಳ ಅವಶ್ಯಕತೆ ಬೇಕೆ ಬೇಕು ಹಾಗೂ ಮೊಟ್ಟೆಗಳು ನೀಡುವ ಗುಣಮಟ್ಟದ ಪ್ರೊಟೀನುಗಳಿಗೆ ಸದ್ಯಕ್ಕೆ ಯಾವುದೇ ಪೌಷ್ಟಿಕ ಆಹಾರಗಳು ಸರಿಸಾಟಿಯಾಗುವುದಿಲ್ಲ.

ಪ್ರಯೋಗಾಲಯದಲ್ಲಿ ಬೆಳೆದ ಮಾಂಸಗಳ ಕುರಿತು ಮಾತನಾಡುವ ವರದಿಯ ಲೇಖಕರು “ಸಾಗುವಳಿ ಮಾಡಿದ ಪ್ರಾಣಿಯ ಕಾಂಡಕೋಶಗಳಿಂದ ತೆಗೆಯಲ್ಪಟ್ಟ ಪ್ರನಾಳಿಕೆಯಲ್ಲಿನ ಮಾಂಸದ ಉತ್ಪಾದನೆಯನ್ನು ಸಾಂಪ್ರದಾಯಿಕ ಮಾಂಸಕ್ಕೆ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹೊಸ ಆಹಾರಗಳ ಆರೋಗ್ಯ ಪರಿಣಾಮಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸಾಂಪ್ರದಾಯಿಕ ಮಾಂಸಕ್ಕಿಂತಲೂ ಪ್ರನಾಳಿಕೆಯಲ್ಲಿನ ಮಾಂಸದ ಪೌಷ್ಟಿಕಾಂಶ ಸಂಯೋಜನೆಯನ್ನು ಸುಲಭವಾಗಿ ಮಾರ್ಪಡಿಸಬಹುದು.” ಇದು ಮತ್ತೊಂದು ದಾರಿ ತಪ್ಪಿಸುವ ಹೇಳಿಕೆಯಾಗಿದ್ದು, ಪ್ರಯೋಗಾಲಯದಲ್ಲಿ ಉತ್ಪಾದಿಸುವ ಮಾಂಸಕ್ಕೆ ಪ್ರಯೋನವನ್ನು ನೀಡುವುದಲ್ಲದೆ, ನಮ್ಮ ಇಡೀ ಆಹಾರ ವ್ಯವಸ್ಥೆಯನ್ನೇ ಸ್ಥಳೀಯ ಸಂಸ್ಕøತಿ, ಸಂಪ್ರದಾಯ ಮತ್ತು ಆಹಾರಗಳನ್ನು ಕಡೆಗಣಿಸಿ, ಹಲವು ಕಂಪನಿಗಳಿಗೆ ಗುತ್ತಿಗೆ ನೀಡುವ ಅತ್ಯಂತ ಅಪಾಯಕಾರಿ ಯೋಜನೆಯಾಗಿದೆ.

ಕಾರ್ಬೋಹೈಡ್ರೇಟ್ ಅಂಶವನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಆಹಾರಕ್ರಮಗಳು ಹೆಚ್ಚಿನ ಮರಣ ಪ್ರಮಾಣ, ರಕ್ತದಲ್ಲಿ ಟ್ರಿಗ್ಲೈಸರೈಡ್ ಸಾಂದ್ರತೆಯನ್ನು ಹೆಚ್ಚಿಸುವುದು, ರಕ್ತದೊತ್ತಡವನ್ನು ಅಧಿಕ ಮಾಡುವುದು ಹಾಗೂ ಎಚ್‍ಡಿಎಲ್ ಕೊಬ್ಬಿನಾಂಶವನ್ನು ಕಡಿಮ ಮಾಡುವುದರ ಅಪಾಯಗಳನ್ನು ಹೊಂದಿದೆ ಎಂಬುದಕ್ಕೆ ಪೂರಕ ಪುರಾವೆಗಳ ಕುರಿತು ಮಾತನಾಡುವ ಇವರು “ಪ್ರಪಂಚದಾದ್ಯಂತ ಇರುವ ಬಹುತೇಕ ಆಹಾರ ಕ್ರಮಗಳಲ್ಲಿ ಧಾನ್ಯಗಳು ಅತಿ ಹೆಚ್ಚು ಶಕ್ತಿಯ ಮೂಲಗಳನ್ನು ಹೊಂದಿವೆ. ಧಾನ್ಯಗಳ ಸಂಸ್ಕರಣೆ ಒಳ್ಳೆಯ ಆರೋಗ್ಯಕ್ಕೆ ಅಗತ್ಯವಾದ ಅವುಗಳಲ್ಲಿನ ಫೈಬರ್ ಮತ್ತು ಇನ್ನಿತರ ಪೋಷಕಾಂಶಗಳ ಕಳೆದುಹೋಗುವಿಕೆಗೆ ಕಾರಣವಾಗುತ್ತದೆ.” ಎಂದು ಹೇಳುತ್ತಾರೆ. ಧಾನ್ಯಗಳನ್ನು ಸಂಸ್ಕರಿಸದೆ ಇದ್ದರೆ ಅವು ಒಮ್ಮಿಂದೊಮ್ಮೆಗೆ ಮಾಯಾ ಬೀಜಗಳಾಗಿ ಪರಿವರ್ತನೆಯಾಗುತ್ತವೆ ಎಂಬುದು ಇವರ ಅಭಿಪ್ರಾಯ. ಸತ್ಯವೆಂದರೆ, ಸಂಸ್ಕರಣೆಯಾಗಲಿ ಅಥವಾ ಸಂಸ್ಕರಣೆಯಾಗದಿರಲಿ, ಧಾನ್ಯಗಳು ಪೌಷ್ಟಿಕವಾಗಿ ಅಸಮರ್ಪಕವಾಗಿವೆ ಹಾಗೂ ಇನ್ನಿತರ ಪೌಷ್ಟಿಕಾಂಶಗಳ ಕೊರತೆಯನ್ನು ಹೊಂದಿವೆ.

ಅಂತರಾಷ್ಟ್ರೀಯ ಸಂಶೋಧಕರಿಂದ ಟೀಕೆಗೊಳಗಾಗಿರುವ ಅನೇಕ ಅಸಮಂಜಸ ಅಂಶಗಳು ಈ ವರದಿಯಲ್ಲಿವೆ. ಜಾತಿ ವ್ಯಸನಿ ಕಾರ್ಪೊರೇಟ್ ಗುಂಪುಗಳು ಈ ದೇಶದ ಬಹುಜನರ ಮೇಲೆ, ಶೊಷಿತ ಸಮುದಾಯಗಳ ಮೇಲೆ ತಮ್ಮ ಅವೈಜ್ಞಾನಿಕ, ಕಾರ್ಪೊರೇಟ್ ಅವಲಂಬಿತ, ಸಸ್ಯಾಧಾರಿತ ಹಾಗೂ ಪೌಷ್ಟಿಕ ಅಸಮರ್ಪಕತೆಯಿಂದ ಕೂಡಿದ ಆಹಾರ ಕ್ರಮವನ್ನು ಹೇರುತ್ತಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದು ಪ್ರಮುಖವಾಗಿದೆ. ಸಾಂಪ್ರದಾಯಿಕ ಮತ್ತು ಪೌಷ್ಟಿಕಾಂಶ ಸಮೃದ್ಧ ಆಹಾರ ಕ್ರಮವನ್ನು ನಾಶಪಡಿಸುವುದರೊಂದಿಗೆ, ಇದು ಶೋಷಿತ ಸಮುದಾಯಗಳನ್ನು ಮತ್ತಷ್ಟು ಆರ್ಥಿಕವಾಗಿ, ಪೌಷ್ಟಿಕವಾಗಿ, ಹಾಗೂ ಸಾಮಾಜಿಕವಾಗಿ ಅಂಚಿಗೆ ತಳ್ಳುವುದರಲ್ಲಿ ಸಂದೇಹವೇ ಇಲ್ಲ.

ಲೇಖಕರು ಸಾರ್ವಜನಿಕ ಆರೋಗ್ಯ ವೈದ್ಯರು ಹಾಗೂ ಆರೋಗ್ಯ, ಜಾತಿ ಮತ್ತು ಪೌಷ್ಟಿಕಾಂಶಗಳ ಸಾಮಾಜಿಕ ದುಷ್ಪರಿಣಾಮಗಳ ಸಂಶೋಧಕರು.

ಈ ಲೇಖನದ ಇಂಗ್ಲೀಷ್ ಆವೃತ್ತಿ ರೌಂಡ್ ಟೇಬಲ್ ಇಂಡಿಯಾ ತಾಣದಲ್ಲಿ ಪ್ರಕಟವಾಗಿತ್ತು.

ಕನ್ನಡಕ್ಕೆ ಅನುವಾದ: ಅಜಯ್ ರಾಜ್

2 comments

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s